ಹೈದರಾಬಾದ್, ಏ.13(DaijiworldNews/TA): ಭಾರತ ತಂಡದ ಯುವ ಮತ್ತು ಆರಂಭಿಕ ಬ್ಯಾಟ್ಸ್ಮನ್ ಅಭಿಷೇಕ್ ಶರ್ಮಾ ಇತ್ತೀಚಿನ ದಿನಗಳಲ್ಲಿ ಸುದ್ದಿಯಲ್ಲಿದ್ದಾರೆ. ಇದೀಗ ಹೈದರಾಬಾದ್ನ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಶನಿವಾರ ನಡೆದ ಐಪಿಎಲ್ನ 27ನೇ ಪಂದ್ಯದಲ್ಲಿ ಅಭಿಷೇಕ್ ಬರೋಬ್ಬರಿ 106 ಮೀಟರ್ ಉದ್ದದ ಸಿಕ್ಸ್ ಬಾರಿಸಿ ದಾಖಲೆ ನಿರ್ಮಿಸಿದ್ದಾರೆ.

ಪಂಜಾಬ್ ಕಿಂಗ್ಸ್ ವಿರುದ್ಧದ ಪಂದ್ಯದ 10ನೇ ಓವರ್ನ 2ನೇ ಎಸೆತದಲ್ಲಿ ಅಭಿಷೇಕ್ ಭರ್ಜರಿ ಸಿಕ್ಸ್ ಬಾರಿಸಿದರು. ಈ ಸಿಕ್ಸ್ನೊಂದಿಗೆ ಐಪಿಎಲ್ 2025 ರಲ್ಲಿ ಅತೀ ದೂರದ ಸಿಕ್ಸ್ ಸಿಡಿಸಿದ ಹೆಗ್ಗಳಿಕೆಗೆ ಪಾತ್ರರಾದರು. ಇದಕ್ಕೂ ಮುನ್ನ ಈ ದಾಖಲೆ ಆರ್ಸಿಬಿ ತಂಡದ ಫಿಲ್ ಸಾಲ್ಟ್ ಹೆಸರಿನಲ್ಲಿತ್ತು ಎಂದು ಹೇಳಲಾಗಿದೆ. ಹೀಗೆ ಮಾರ್ಕೊ ಯಾನ್ಸೆನ್ ಎಸೆತದಲ್ಲಿ 106 ಮೀಟರ್ ದೂರದ ಸಿಕ್ಸ್ನೊಂದಿಗೆ ಅಭಿಷೇಕ್ ಶರ್ಮಾ ಹೊಸ ದಾಖಲೆ ಬರೆದಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಕಿಂಗ್ಸ್ ತಂಡವು 20 ಓವರ್ಗಳಲ್ಲಿ 245 ರನ್ ಕಲೆಹಾಕಿದರೆ, ಸನ್ರೈಸರ್ಸ್ ಹೈದರಾಬಾದ್ ಪರ ಅಭಿಷೇಕ್ ಶರ್ಮಾ 55 ಎಸೆತಗಳಲ್ಲಿ 10 ಸಿಕ್ಸ್ ಹಾಗೂ 14 ಫೋರ್ಗಳೊಂದಿಗೆ 141 ರನ್ ಬಾರಿಸಿದರು. ಈ ಶತಕದ ನೆರವಿನೊಂದಿಗೆ ಸನ್ರೈಸರ್ಸ್ ಹೈದರಾಬಾದ್ ತಂಡವು 18.3 ಓವರ್ಗಳಲ್ಲಿ 247 ರನ್ ಬಾರಿಸಿ 8 ವಿಕೆಟ್ಗಳ ಜಯ ಸಾಧಿಸಿದೆ ಎಂದು ಹೇಳಲಾಗಿದೆ.