ಭೋಪಾಲ್, ಮೇ 09 (Daijiworld News/MSP): ಮಧ್ಯಪ್ರದೇಶದ ಭೋಪಾಲ್ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸಾಧ್ವಿ ಪ್ರಗ್ಯಾ ಸಿಂಗ್ ಕಣಕ್ಕಿಳಿದಿದ್ದು ಇವರ ವಿರುದ್ದ ಕಣಕ್ಕೆ ಇಳಿದಿರುವ ಕಾಂಗ್ರೆಸ್ ನ ದಿಗ್ವಿಜಯ್ ಸಿಂಗ್ ಠಾಕೂರ್ ಗೆಲ್ಲಲೇಬೇಕು ಎಂದು ಶತಪ್ರಯತ್ನ ಮಾಡುತ್ತಿದ್ದು ಹೀಗಾಗಿ ಇವರು ಕೂಡಾ ಹಿಂದುತ್ವದ ಮೊರೆ ಹೋಗಿದ್ದು ಭೋಪಾಲ್ ನಲ್ಲಿ ಬುಧವಾರ ನಡೆಸಿದ ರೋಡ್ ಶೋನಲ್ಲಿ ಎಲ್ಲೆಲ್ಲೂ ಕೇಸರಿ ದ್ವಜಗಳು ಕಂಡುಬಂದವು.

ಇದರೊಂದಿಗೆ ರೋಡ್ಶೋ ವೇಳೆ ಭದ್ರತೆಗೆ ನಿಯೋಜಿತರಾಗಿದ್ದ ಮಹಿಳಾ ಪೊಲೀಸ್ ಸಿಬ್ಬಂದಿಗೂ ಬಿಡದೆ ಕೇಸರಿ ಬಣ್ಣದ ಶಾಲು ಹಾಕಿಸಿದ್ದಾರೆ ಎನ್ನುವ ಆರೋಪವೂ ವ್ಯಕ್ತವಾಗಿದೆ. ರೋಡ್ ಶೋ ದ ವೀಡಿಯೊ ಒಂದು ವೈರಲ್ ಆಗಿದ್ದು, ಹಿಂದು ವೋಟ್ ಬ್ಯಾಂಕ್ ತಮ್ಮತ್ತ ಸೆಳೆಯಲು ಕೇಸರಿ ಬಣ್ಣದ ಶಾಲುಗಳನ್ನು ದಿಗ್ವಿಜಯ್ ಹಂಚಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಆಕ್ರೋಶ ವ್ಯಕ್ತವಾಗಿದೆ. ಆದರೆ ಈ ವಿಚಾರವನ್ನು ಅಲ್ಲಗಳೆದಿರುವ ಭೋಪಾಲ್ ಡಿಐಜಿ ಇರ್ಷಾದ್ ವಾಲಿ, ದೃಶ್ಯದಲ್ಲಿರುವುದು ಮಹಿಳಾ ಪೊಲೀಸ್ ಸಿಬ್ಬಂದಿಯಲ್ಲ. ಪೊಲೀಸರೊಂದಿಗೆ ಸ್ವಯಂಸೇವಕರಾಗಿ ಸಮಾವೇಶದಲ್ಲಿ ಭದ್ರತಾ ನಿರ್ವಹಣೆ ಕಾರ್ಯದಲ್ಲಿ ಭಾಗಿಯಾಗಿದ್ದರು ಎಂದಿದ್ದಾರೆ.
ಭೋಪಾಲ್ ಲೋಕಸಭೆ ಕ್ಷೇತ್ರಕ್ಕೆ ಮೇ 12ರಂದು ಮತದಾನ ನಡೆಯಲಿದ್ದು ಮೇ 23ರಂದು ಫಲಿತಾಂಶ ಹೊರಬೀಳಲಿದೆ.