ವಾರಾಣಸಿ, ಡಿ.14 (DaijiworldNews/PY): ಪ್ರಧಾನಿ ನರೇಂದ್ರ ಮೋದಿ ಅವರು ಬಿಜೆಪಿ ಆಡಳಿತವಿರುವ ರಾಜ್ಯಗಳ ಸಿಎಂಗಳೊಂದಿಗೆ ಮಧ್ಯರಾತ್ರಿಯ ತನಿಕ ಸಭೆ ನಡೆಸಿದ್ದು, ಬಳಿಕ ವಾರಣಾಸಿಯಲ್ಲಿ ಅಭಿವೃದ್ದಿ ಕಾಮಗಾರಿಗಳ ಪರಿಶೀಲನೆ ನಡೆಸಲು ತಡರಾತ್ರಿ ಬನಾರಸ್ ರೈಲು ನಿಲ್ದಾಣಕ್ಕೆ ಭೇಟಿ ನೀಡಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, "ಮುಂದಿನ ನಿಲ್ದಾಣ.. ಬನಾರಸ್ ನಿಲ್ದಾಣ. ನಾವು ರೈಲು ಸಂಪರ್ಕವನ್ನು ಹೆಚ್ಚಿಸಲು ಹಾಗೂ ಸ್ವಚ್ಛ, ಆಧುನಿಕ ಹಾಗೂ ಪ್ರಯಾಣಿಕರ ಸ್ನೇಹಿ ರೈಲು ನಿಲ್ದಾಣಗಳನ್ನು ಖಚಿತಪಡಿಸಿಕೊಳ್ಳಲು ಕಾರ್ಯವನ್ನು ಮಾಡುತ್ತಿದ್ದೇವೆ" ಎಂದಿದ್ದಾರೆ.
ವಾರಣಾಸಿಯ ಕಾರ್ಯಕ್ರಮಗಳ ಮೂಲಕ ಬಿಜೆಪಿ ಒಗ್ಗಟ್ಟಿನ ಪ್ರದರ್ಶನವನ್ನು ಮಾಡಿದೆ. ದೇಶಾದ್ಯಂತ ಎಲ್ಲಾ ಬಿಜೆಪಿ ಮುಖ್ಯಮಂತ್ರಿಗಳು ಸೋಮವಾರ ವಾರಣಾಸಿಗೆ ಆಗಮಿಸಿದ್ದು, ಅವರ ಜೊತೆ ಪ್ರಧಾನಿ ಅವರು ಪರಿಶೀಲನಾ ಸಭೆಯನ್ನೂ ಸಹ ನಡೆಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರ ಕಾಶೀ ವಿಶ್ವನಾಥ ದೇವಸ್ಥಾನದ ಕಾರಿಡಾರ್ನ ಮೊದಲ ಹಂತದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಂಡಿದ್ದರು. ಗಂಗಾರತಿಯಲ್ಲಿ ಪಾಲ್ಗೊಂಡ ನಂತರ ಬಿಜೆಪಿ ಮುಖ್ಯಮಂತ್ರಿಗಳೊಂದಿಗೆ ಮಾತುಕತೆ ನಡೆಸಿದ್ದಾರೆ.