ಚಿಕ್ಕಮಗಳೂರು, ಡಿ.03 (DaijiworldNews/PY): "ಇಬ್ಬರಿಗೆ ಓಮ್ರಿಕಾನ್ ಸೋಂಕು ಪತ್ತೆಯಾಗಿದ್ದು, ಸೋಂಕು ಹರಡದಂತೆ ಕ್ರಮ ಕೈಗೊಳ್ಳಬೇಕು. ಅಂತರಾಷ್ಟ್ರೀಯ ವಿಮಾನಗಳನ್ನು ನಿಲ್ಲಿಸಬೇಕು. ವಿಮಾನ ನಿಲ್ದಾಣದಲ್ಲಿ ಸೂಕ್ತವಾದ ತಪಾಸಣೆ ಮಾಡಬೇಕು" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೊರೊನಾ ಎರಡನೇ ಅಲೆಯ ಸಂದರ್ಭ ಸರ್ಕಾರ ಸೂಕ್ತವಾದ ಸಿದ್ದತೆಗಳನ್ನು ಮಾಡಿಕೊಂಡಿರಲಿಲ್ಲ. ಈ ಕಾರಣದಿಂದ ಹೆಚ್ಚು ಮಂದಿ ಮೃತಪಟ್ಟಿದ್ದರು. ಈ ಬಾರಿ ಹಾಗಾಗದಂತೆ ನೋಡಿಕೊಳ್ಳಬೇಕು" ಎಂದಿದ್ದಾರೆ.
"ಸರ್ಕಾರ ಇಷ್ಟೊತ್ತಿಗಾಗಲೇ ಎರಡು ಡೋಸ್ ಮುಗಿಸಬೇಕಿತ್ತು. ಕೇಂದ್ರ ಸರ್ಕಾರ ಬೂಸ್ಟರ್ ವ್ಯಾಕ್ಸಿನೇಷನ್ ಮಾಡಿಸಲು ತಕ್ಷಣವೇ ಅನುಮತಿ ನೀಡಬೇಕು" ಎಂದು ತಿಳಿಸಿದ್ದಾರೆ.
ಕಾಂಗ್ರೆಸ್ನಿಂದ ಗೂಂಡಾಗಳನ್ನು ಕರೆಸಿ ಪ್ರಚಾರ ನಡೆಸಲಾಗುತ್ತಿದೆ ಎನ್ನುವ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, "ರಮೇಶ್ ಜಾರಕಿಹೊಳಿ ಅವರು ಅವರ ಪಕ್ಷದ ವಿರುದ್ದವಾಗಿಯೇ ನಿಲ್ಲಿಸಿಕೊಂಡಿದ್ದಾರೆ. ಅವರಿಗೆ ಈ ರೀತಿಯ ಹೇಳಿಕೆ ನೀಡಲು ಯಾವ ನೈತಿಕತೆ ಇದೆ? ಬಿಜೆಪಿಗೆ ಅಧಿಕೃತ ಅಭ್ಯರ್ಥಿ ಇದ್ದರೂ ಅವರ ತಮ್ಮನನ್ನು ನಿಲ್ಲಿಸಿದ್ದಾರೆ" ಎಂದು ಟಾಂಗ್ ನೀಡಿದ್ದಾರೆ.
ಸಿಎಂ ಬದಲಾವಣೆ ಬಗ್ಗೆ ಈಶ್ವರಪ್ಪ ಹೇಳಿಕೆ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಸಿಎಂ ಬದಲಾವಣೆ ಬಗ್ಗೆ ಈಶ್ವರಪ್ಪ ಅವರು ಬಾಯಿತಪ್ಪಿ ನಿಜ ವಿಚಾರವನ್ನು ಹೇಳಿದ್ದಾರೆ. ಬಳಿಕ ಅವರು ಅದನ್ನು ಸರಿಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಆದರೆ, ಇದು ಜನರಿಗೆ ತಿಳಿದಿದೆ" ಎಂದು ತಿಳಿಸಿದ್ದಾರೆ.