ತಿರುವನಂತಪುರಂ, ಡಿ.03 (DaijiworldNews/PY): 15 ವರ್ಷದ ಮಕ್ಕಳಿಬ್ಬರಿಗೆ ತಪ್ಪಾಗಿ ಕೊರೊನಾ ಲಸಿಕೆ ಹಾಕಿದ ಪರಿಣಾಮ ಅವರನ್ನು ಆಸ್ಪತ್ರೆಗೆ ದಾಖಲಿಸಿದ ಘಟನೆ ತಿರುವನಂತಪುರಂನ ಗ್ರಾಮೀಣ ಭಾಗದಲ್ಲಿರುವ ಆರ್ಯನಾಡು ಎಂಬ ಪ್ರದೇಶದಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ
ಮುನ್ನೆಚ್ಚರಿಕಾ ಲಸಿಕೆ ತೆಗೆದುಕೊಳ್ಳುವುದಕ್ಕೆ ಆರ್ಯನಾಡು ಸಮುದಾಯ ಆರೋಗ್ಯ ಕೇಂದ್ರಕ್ಕೆ 10ನೇ ತರಗತಿಯ ಇಬ್ಬರು ವಿದ್ಯಾರ್ಥಿನಿಯರು ತೆರಳಿದ್ದರು. ಈ ವೇಳೆ ವೈದ್ಯಕೀಯ ಸಿಬ್ಬಂದಿಗಳು ಮುನ್ನೆಚ್ಚರಿಕಾ ಲಸಿಕೆ ನೀಡುವ ಬದಲು ಕೊರೊನಾ ಲಸಿಕೆ ನೀಡಿದ್ದಾರೆ.
ಘಟನೆಯ ಬಳಿಕ ಎಚ್ಚೆತ್ತುಕೊಂಡ ವೈದ್ಯಕೀಯ ಸಿಬ್ಬಂದಿಗಳು ಇಬ್ಬರು ವಿದ್ಯಾರ್ಥಿಗಳ ಮೇಲೆ ನಿಗಾ ವಹಿಸಲು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿದ್ದಾರೆ.
ವಿದ್ಯಾರ್ಥಿನಿಯರ ಆರೋಗ್ಯ ಸ್ಥಿರವಾಗಿದೆ ಎಂದು ವೈದ್ಯಕೀಯ ಮೂಲಗಳು ಹೇಳಿವೆ.
ಸಂತ್ರಸ್ತ ವಿದ್ಯಾರ್ಥಿಗಳ ಪೋಷಕರಿಂದ ಎರಡು ಪ್ರತ್ಯೇಕ ದೂರುಗಳು ಬಂದಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಆರ್ಯನಾಡು ಪೊಲೀಸರು ಹೇಳಿದ್ದಾರೆ.