ಪಾಲಕ್ಕಾಡ್, ಮಾ.30 (DaijiworldNews/HR): "ಕೆಲವು ಬೆಳ್ಳಿ ತುಂಡುಗಳಿಗಾಗಿ ಜೂಡಸ್ ಯೇಸು ಕ್ರಿಸ್ತನನ್ನು ಮೋಸ ಮಾಡಿದ್ದನು ಅದರಂತೆ, ಚಿನ್ನದ ಕೆಲವೇ ತುಂಡುಗಳಿಗಾಗಿ ಎಲ್ಡಿಎಫ್ ಕೇರಳದ ಜನರಿಗೆ ಮೋಸ ಮಾಡಿದೆ" ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ಪ್ರಧಾನಿ ನರೇಂದ್ರ ಮೋದಿಯವರು ಕೇರಳ ವಿಧಾನಸಭಾ ಚುನಾವಣೆಯಲ್ಲಿ ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಬಿಜೆಪಿ ಅಭ್ಯರ್ಥಿ ಮೆಟ್ರೊಮ್ಯಾನ್ ಇ.ಶ್ರೀಧರನ್ ಪರವಾಗಿ ಇಂದು ಚುನಾವಣಾ ಪ್ರಚಾರ ಮಾಡಿದ್ದಾರೆ.
ಕಾರ್ಯಕ್ರಮದಲ್ಲಿ ಇ.ಶ್ರೀಧರನ್ ಅವರನ್ನು ಸನ್ಮಾನಿಸಿ ಮಾತನಾಡಿದ ಮೋದಿ, "ಕೇರಳ ರಾಜಕೀಯದಲ್ಲಿ ಎಲ್ಡಿಎಫ್ ಮತ್ತು ಯುಡಿಎಫ್ ಸೌಹಾರ್ದ ಒಪ್ಪಂದ ಮಾಡಿಕೊಂಡಿರುವುದು ಅನೇಕ ವರ್ಷಗಳಿಂದ ಕಾಪಾಡಿಕೊಂಡಿರುವ ಗೌಪ್ಯವಾದ ಗುಟ್ಟು. ಇದೇ ಮೊದಲ ಬಾರಿ ಕೇರಳದ ಮತದಾರರು ಏನಿದು ಮ್ಯಾಚ್ ಫಿಕ್ಸಿಂಗ್ ಎಂದು ಕೇಳುತ್ತಿದ್ದಾರೆ. ಯುಡಿಎಫ್ ಮತ್ತು ಎಲ್ಡಿಎಫ್ ಯಾವ ರೀತಿ ಜನರ ಹಾದಿ ತಪ್ಪಿಸುತ್ತಿದೆ ಎಂಬುದನ್ನು ಮತದಾರರು ಚಿಂತಿಸುತ್ತಿದ್ದಾರೆ" ಎಂದರು.
ಇನು "ಮುಂಬರುವ ಚುನಾವಣೆಯಲ್ಲಿ ಬಿಜೆಪಿಗೆ ಆಶೀರ್ವದಿಸಿ, ಕೇರಳಕ್ಕೆ ನಾನು ಭಿನ್ನವಾದ ಕನಸುಗಳನ್ನು ಹೊತ್ತು ನಾನು ಬಂದಿದ್ದೇನೆ" ಎಂದರು.
ಬಳಿಕ ಮಾತನಾಡಿದ ಬಿಜೆಪಿ ಅಭ್ಯರ್ಥಿ ಇ.ಶ್ರೀಧರನ್, "ಪಾಲಕ್ಕಾಡ್ ವಿಧಾನಸಭಾ ಕ್ಷೇತ್ರದಲ್ಲಿ 24 ಗಂಟೆ ನೀರು ಪೂರೈಕೆ, ಘನ ತ್ಯಾಜ್ಯ ನಿರ್ವಹಣೆ ಯೋಜನೆಗೆ ಬೇಕಾಗಿರುವ ಮಾಸ್ಟರ್ ಪ್ಲಾನ್ ನಾನು ಸಿದ್ಧಪಡಿಸಿದ್ದೇನೆ" ಎಂದರು.
ಇನ್ನು "ಮುಂದಿನ 5 ವರ್ಷಗಳಲ್ಲಿ 25 ಲಕ್ಷ ಗಿಡನೆಡುವ ಮೂಲಕ ಇಲ್ಲಿ ಹಸಿರು ಹೊದಿಕೆ ಸೃಷ್ಟಿಸುವ ಕಾರ್ಯ ಯೋಜನೆಯನ್ನು ಹೊಂದಿದ್ದೇನೆ" ಎಂದು ಹೇಳಿದ್ದಾರೆ.