ಬೆಂಗಳೂರು, ಮಾ.27 (DaijiworldNews/PY): ನಗರದ ನರ್ಸಿಂಗ್ ಕಾಲೇಜಿನ ಮುಖ್ಯಸ್ಥರೋರ್ವರ ಪುತ್ರನನ್ನು ಅಪಹರಿಸಿ ಬಿಡುಗಡೆಗಾಗಿ 2 ಕೋಟಿ.ರೂ. ಬೇಡಿಕೆ ಇಟ್ಟಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಸ್ಥಳೀಯ ನಿವಾಸಿಗಳಾದ ಅಬ್ದುಲ್ ಪಹಾದ್, ಜಬೀವುಲ್ಲಾ, ಕೊರೆವೆಲ್ ಸಲ್ಮಾನ್ ಹಾಗೂ ತೌಫಿಕ್ ಎಂದು ಗುರುತಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಕೆಲವರು ತಲೆಮರೆಸಿಕೊಂಡಿದ್ದಾರೆ.
"ಮಾರ್ಚ್ 25ರ ಗುರುವಾರದಂದು ಕೆ.ಜಿ.ಹಳ್ಳಿ ನಿವಾಸಿಯಾಗಿದ್ದ ರಬೀಜ್ ಅರಾಪತ್ (22) ಎಂಬುವರನ್ನು ಅಪಹರಣ ಮಾಡಲಾಗಿತ್ತು. ಈ ಬಗ್ಗೆ ರಬೀಜ್ ತಂದೆ ಠಾಣೆಗೆ ದೂರು ನೀಡಿದ್ದರು. ಪ್ರಕರಣ ದಾಖಲಾದ ಏಳು ಗಂಟೆಯಲ್ಲೇ ಪೊಲೀಸರು ಯುವಕನನ್ನು ರಕ್ಷಿಸಿ ಆರೋಪಿಗಳನ್ನು ಬಂಧಿಸಿದ್ದಾರೆ" ಎಂದು ನಗರ ಪೊಲೀಸ್ ಕಮಿಷನರ್ ಕಮಲ್ ಪಂತ್ ಹೇಳಿದ್ದಾರೆ.
"ಆರೋಪಿಗಳು, ವಿವಾಹ ಹಾಗೂ ಇತರೆ ಕೆಲಸಗಳಿಗಾಗಿ ಸಾಲ ಮಾಡಿಕೊಂಡಿದ್ದು, ಆ ಸಾಲವನ್ನು ತೀರಿಸುವುದಕ್ಕಾಗಿ ಶ್ರೀಮಂತನ ಮಗನನ್ನು ಅಪಹರಿಸಿ ಹಣ ಪಡೆದುಕೊಳ್ಳಲು ಮುಂದಾಗಿದ್ದರು" ಎಂದು ತಿಳಿಸಿದ್ದಾರೆ.
"ರಬೀಜ್ ಅರಾಪತ್ ಅವರ ತಂದೆ ನಸಿಂಗ್ ಕಾಲೇಜಿನ ಮುಖ್ಯಸ್ಥರು. ಹಾಗಾಗಿ ಅವರ ಬಳಿ ಹಣ ಇರುವುದನ್ನು ತಿಳಿದುಕೊಂಡಿದ್ದ ಆರೋಪಿಗಳು ಅವರ ಪುತ್ರನನ್ನು ಅಪಹರಿಸಲು ಸಂಚು ರೂಪಿಸಿದ್ದು, ಮಾರ್ಚ್ 25ರ ಗುರುವಾರ ಮಧ್ಯಾಹ್ನ ರಬೀಜ್ ಅವರನ್ನು ಅಪಹರಿಸಿ, ಬಳಿಕ ರಬೀಜ್ ಅವರ ತಂದೆಗೆ ಕರೆ ಮಾಡಿದ್ದರು" ಎಂದು ಕಮಲ್ ಪಂತ್ ಹೇಳಿದ್ದಾರೆ.
ಎರಡು ಕೋಟಿ ನೀಡಿದರೆ ನಿಮ್ಮ ಮಗನನ್ನು ಬಿಡುತ್ತೇವೆ. ಹಣ ನೀಡದೇ ಇದ್ದರೆ ಮಗನ ಕೈ-ಕಾಲು ಕತ್ತರಿಸುತ್ತೇವೆ ಎಂದು ಆರೋಪಿಗಳು ಬೆದರಿಕೆ ಹಾಕಿದ್ದು, ಪೊಲೀಸರಿಗೆ ಈ ಬಗ್ಗೆ ದೂರು ನೀಡದಂತೆ ಎಚ್ಚರಿಸಿದ್ದರು.
"ಅಪಹರಣ ಮಾಡಿದ ಜಾಗ ಹಾಗೂ ಇತರೆ ಪ್ರದೇಶದಲ್ಲಿರುವ ಸಿಸಿಟಿವಿ ಕ್ಯಾಮೆರಾಗಳನ್ನು ಪೊಲೀಸರ ತಂಡ ಪರಿಶೀಲನೆ ಮಾಡಿದ್ದು, ಆರೋಪಿಗಳನ್ನು ಯಶಸ್ವಿಯಾಗಿ ಬಂಧಿಸಿದ್ದಾರೆ. ಪೊಲೀಸರ ತಂಡಕ್ಕೆ 40 ಸಾವಿರ. ರೂ. ಬಹುಮಾನ ಘೋಷಣೆ ಮಾಡಲಾಗಿದೆ" ಎಂದಿದ್ದಾರೆ.