ಬೆಂಗಳೂರು, ಮಾ.26 (DaijiworldNews/PY): "ಕೊರೊನಾ ಅಂಕಿ-ಅಂಶಗಳನ್ನು ಮರೆಮಾಚುವ ಪ್ರಶ್ನೆಯೇ ಇಲ್ಲ. ಸರ್ಕಾರ ವಸ್ತುಸ್ಥಿತಿಯ ಅಂಕಿ-ಅಂಶವನ್ನು ಮಾತ್ರವೇ ಘೋಷಣೆ ಮಾಡುತ್ತದೆ" ಎಂದು ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಹೇಳಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೊರೊನಾಕ್ಕೆ ಸಂಬಂಧಿಸಿದಂತೆ ಸರ್ಕಾರ ಯಾವುದೇ ಅಂಕಿ-ಅಂಶವನ್ನು ಮುಚ್ಚಿಡುವುದಿಲ್ಲ. ನಮ್ಮ ಸರ್ಕಾರಕ್ಕೆ ಆ ರೀತಿಯ ಉದ್ದೇಶವಿಲ್ಲ. ಎಲ್ಲಾ ವಿರೋಧ ಪಕ್ಷಗಳ ನಾಯಕರು ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಸಲಹೆ, ಸೂಚನೆಗಳನ್ನು ನೀಡಬಹುದು. ಸಿಎಂ ಅವರು ತೀರ್ಮಾನ ಮಾಡಿ ಸರ್ವಪಕ್ಷಗಳ ಸಭೆ ನಡೆಸಿ ಕೊರೊನಾ ವಿಚಾರದ ಬಗ್ಗೆ ಚರ್ಚೆ ನಡೆಸಬಹುದು. ಮುಕ್ತವಾಗಿ ಚರ್ಚೆ ನಡೆಸುತ್ತೇವೆ" ಎಂದರು.
"ಹಬ್ಬಗಳ ಆಚರಣೆ ಬಗ್ಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ತೀರ್ಮಾನ ಕೈಗೊಳ್ಳುತ್ತಾರೆ. ಕಳೆದ ವರ್ಷ ಕೂಡಾ ಅನೇಕ ಹಬ್ಬಗಳ ಆಚರಣೆಗಳಿಗೆ ನಿರ್ಬಂಧ ಹೇರಲಾಗಿತ್ತು. ಈಗಲೂ ಕೂಡಾ ಮಾರ್ಗಸೂಚಿ ಹೊರಡಿಸಲಾಗಿದೆ. ಮಣಿಪಾಲ್ ಸಂಸ್ಥೆಯಲ್ಲಿ 704 ಪ್ರಕರಣ ಕಂಡುಬಂದಿದ್ದು, ಸಂಪೂರ್ಣ ಸೀಲ್ಡೌನ್ ಮಾಡಲಾಗಿದೆ" ಎಂದು ತಿಳಿಸಿದರು.
"ಮಹಾರಾಷ್ಟ್ರದಲ್ಲಿ ಗುರುವಾರದಂದು 35,000 ಪ್ರಕರಣಗಳು ಪತ್ತೆಯಾಗಿದ್ದು, ಇಲ್ಲಿ 2,000 ಪ್ರಕರಣಗಳು ವರದಿಯಾಗಿವೆ. ಜನರು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಮತ್ತು ಮುನ್ನೆಚ್ಚರಿಕೆಗಳನ್ನು ಅನುಸರಿಸಬೇಕು. ಯುವಜನರು ಕುಟುಂಬದ ಹಿರಿಯರನ್ನು ಲಸಿಕೆ ಪಡೆಯಲು ಕೇಂದ್ರಕ್ಕೆ ಕರೆದೊಯ್ಯಬೇಕು" ಎಂದರು.
"ತಾಂತ್ರಿಕಾ ಸಲಹಾ ಸಮಿತಿ ಹಲವಾರು ಮುನ್ನೆಚ್ಚರಿಕಾ ಕ್ರಮಗಳನ್ನು ಸೂಚಿಸಿದೆ. ಈ ನಿಟ್ಟಿನಲ್ಲಿ ಸಿಎಂ ಅವರು ತೀರ್ಮಾನ ಕೈಗೊಳ್ಳಲಿದ್ದಾರೆ. ಯಾವುದೇ ಚಟುವಟಿಕೆಗಳಿಗೆ ನಿರ್ಬಂಧಿಸುವುದು ಕಷ್ಟ. ಸೋಂಕಿನ ಬೆಳವಣಿಗೆ ಬಗ್ಗೆ ಅವಲೋಕಿಸಿ, ಜನಜೀವನಕ್ಕೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುತ್ತದೆ" ಎಂದು ಹೇಳಿದರು.
"ಕೊರೊನಾ ನಿಯಂತ್ರಣಕ್ಕೆ ಸಂಬಂಧಿಸಿದಂತೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಚುನಾವಣಾ ಅಯೋಗಕ್ಕೆ ಭೇಟಿ ನೀಡಿದ್ದು, ಮನವಿ ಸಲ್ಲಿಸಿದ್ದಾರೆ" ಎಂದರು.