ಬೆಂಗಳೂರು, ಮಾ.26 (DaijiworldNews/PY): "ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸ್ವತಃ ಯುವತಿಯೇ ಬಂದು ಕಾನೂನಾತ್ಮಕ ದೂರು ನೀಡಿದರೆ ಎಸ್ಐಟಿಯವರು ಕ್ರಮ ಕೈಗೊಳ್ಳಲಿದ್ದಾರೆ" ಎಂದು ಸಚಿವ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಶುಕ್ರವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಸ್ವತಃ ಯುವತಿ, ವಕೀಲರು ಅಥವಾ ಯಾರೇ ಬಂದು ದೂರು ನೀಡಿದರೂ ಕೂಡಾ ಎಸ್ಐಟಿಯವರು ಕ್ರಮ ಕೈಗೊಳ್ಳಲಿದ್ದಾರೆ. ಯುವತಿ ಬಂದು ಕಾನೂನಾತ್ಮಕವಾಗಿ ದೂರು ನೀಡಲಿ" ಎಂದಿದ್ದಾರೆ.
"ರಕ್ಷಣೆ ವಿಚಾರದ ಬಗ್ಗೆ ಈಗಾಗಲೇ ತಿಳಿಸಿದಂತೆ ಯುವತಿ ಹಾಗೂ ಆಕೆಯ ಕುಟುಂಬದವರಿಗೆ ರಕ್ಷಣೆ ನೀಡುವಂತೆ ಸೂಚಿಸಲಾಗಿದೆ. ಭದ್ರತೆ ನೀಡಲು ಪೊಲೀಸ್ ಇಲಾಖೆಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದ್ದು, ಯುವತಿ ಹಾಗೂ ಆಕೆಯ ಪೋಷಕರು ಭಯಪಟ್ಟುಕೊಳ್ಳುವ ಅವಶ್ಯಕತೆ ಇಲ್ಲ. ಕಾನೂನು ಪ್ರಕಾರ ಏನು ಕ್ರಮ ಇದೆಯೋ ಅದೇ ನಡೆಯಲಿದೆ" ಎಂದು ತಿಳಿಸಿದ್ದಾರೆ.
"ಈ ಪ್ರಕರಣಕ್ಕೆ ಸಂಬಂಧಿಸಿದಂತೆ, ಸಂತ್ರಸ್ತೆ ಸಿದ್ದರಾಮಯ್ಯ ಮತ್ತು ಡಿಕೆ ಶಿವಕುಮಾರ್ ಅವರ ಬಳಿ ರಕ್ಷಣೆ ಕೋರಿದ್ದಾಳೆ ಎನ್ನಲಾಗಿದ್ದು, ಈ ಬಗ್ಗೆ ತಮಗೆ ಮಾಹಿತಿ ಇಲ್ಲ" ಎಂದು ಬಸವರಾಜ್ ಬೊಮ್ಮಾಯಿ ಹೇಳಿದ್ದರು.
"ಎಸ್ಐಟಿ ತನಿಖೆ ನಡೆಯುತ್ತಿರುವಾಗ ಹಲವು ತಿರುವುಗಳು ಎದುರಾಗುತ್ತವೆ. ಈ ಸಂದರ್ಭದಲ್ಲಿ ಹಲವು ಬೆಳವಣಿಗೆಗಳು ನಡೆಯುತ್ತವೆ. ಆದರೆ ಎಸ್ಐಟಿ ತನಿಖೆ ಯಾರ ಪರವಾಗಿಯೂ ಇಲ್ಲ. ತನಿಖೆ ನಿಷ್ಪಕ್ಷಪಾತವಾಗಿ ನಡೆಯುತ್ತದೆ" ಎಂದಿದ್ದರು.