ನವದೆಹಲಿ, ಮಾ.26 (DaijiworldNews/PY): ದೇಶದಲ್ಲಿ ಕೊರೊನಾ ವಾಕ್ಸಿನೇಷನ್ ಅಭಿಯಾನವು ಎಪ್ರಿಲ್ 1ರಿಂದ 45 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಸಿದ್ದವಾಗುತ್ತಿದ್ದಂತೆ, ಕೋವ್ಯಾಕ್ಸಿನ್ ಹೆಚ್ಚಿಸುವಂತೆ ಲಸಿಕೆ ತಯಾರಕ ಭಾರತ್ ಬಯೋಟೆಕ್ಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ.

ಲಸಿಕೆಗೆಗಳ ಪೂರೈಕೆಯ ಸಮಸ್ಯೆಯನ್ನು ಎದುರಿಸುತ್ತಿರುವ ಕೇಂದ್ರವು, ಕೊರೊನಾ ಸೋಂಕಿಗಾಗಿ ತಯಾರಿಸಿದ ದೇಶೀಯ ಲಸಿಕೆಗಳ ಸಾಮರ್ಥ್ಯದ ಅಭಿವೃದ್ದಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಒಂದು ಸಮಿತಿಯನ್ನು ರಚಿಸಿದೆ.
ಭಾರತದಲ್ಲಿ ಈವರೆಗೆ 5,33,24,811 ಡೋಸ್ಗಳನ್ನು ನೀಡಲಾಗಿದ್ದು, ಕೋವ್ಯಾಕ್ಸಿನ್ 50 ಲಕ್ಷಕ್ಕಿಂತ ಅಧಿಕ ಅಥವಾ ಶೇ.10 ಲಸಿಕೆ ಪ್ರಮಾಣವನ್ನು ಹೊಂದಿದೆ.
ಈ ಬಗ್ಗೆ ಮಾಹಿತಿ ನೀಡಿ ಆರೋಗ್ಯ ಸಚಿವಾಲಯದ ಉನ್ನತ ಅಧಿಕಾರಿಗಳು, "ಕೋವ್ಯಾಕ್ಸಿನ್ ಹಾಗೂ ಕೋವಿಶೀಲ್ಡ್ ಈ ಎರಡು ಲಸಿಕೆಗಳು ಸುಮಾರು 8.7 ಕೋಟಿ ಪ್ರಮಾಣ ಹೊಂದಿದೆ. ಈವರೆಗೆ ಹೆಚ್ಚಾಗಿ ಆಕ್ಸ್ಫರ್ಡ್ ವಿಶ್ವವಿದ್ಯಾಲಯ ಅಸ್ಟ್ರಾಜೆನೆಕಾ ಅಭಿವೃದ್ಧಿಪಡಿಸಿದ ಕೋವಿಶೀಲ್ಡ್ ಲಸಿಕೆಯನ್ನು ರಾಜ್ಯಗಳಿಗೆ ರವಾನಿಸಲಾಗಿದೆ. ಆದರೆ, ಫಲಾನುಭವಿಗಳ ಸಂಖ್ಯೆ 34 ಕೋಟಿಗೆ ತಲುಪಿರುವ ಕಾರಣ, ಮುಂಬರುವ ಕೆಲವು ತಿಂಗಳುಗಳಲ್ಲಿ ದೇಶಕ್ಕೆ 64 ಕೋಟಿ ಡೋಸ್ ಲಸಿಕೆಯ ಅವಶ್ಯಕತೆ ಇದೆ" ಎಂದು ತಿಳಿಸಿದ್ದಾರೆ.