ನವದೆಹಲಿ, ಮಾ. 25 (DaijiworldNews/SM): ಕೇಂದ್ರದ ಮೂರು ಕೃಷಿ ಕಾಯ್ದೆಗಳ ವಿರುದ್ಧ ದೆಹಲಿಯ ಗಡಿಯಲ್ಲಿ ನಾಲ್ಕು ತಿಂಗಳಿಂದ ರೈತರ ಪ್ರತಿಭಟನೆ ಹಿನ್ನೆಲೆಯಲ್ಲಿ ಶುಕ್ರವಾರದಂದು 'ಭಾರತ್ ಬಂದ್' ಕರೆ ನೀಡಲಾಗಿದ್ದು, ಈ ದಿನದಂದು ಎಲ್ಲಾ ಅಂಗಡಿಗಳು, ಮಾಲ್ಗಳು, ಮಾರುಕಟ್ಟೆಗಳು ಮತ್ತು ವಾಣಿಜ್ಯ ಸಂಸ್ಥೆಗಳು ಮುಚ್ಚಿರಲಿವೆ ಎಂದು ಸಂಯುಕ್ತಾ ಕಿಸಾನ್ ಮೋರ್ಚಾ (ಎಸ್ಕೆಎಂ) ಗುರುವಾರ ತಿಳಿಸಿದೆ.

ಎಸ್ಕೆಎಂ ಪ್ರಕಾರ, ಬೆಳಿಗ್ಗೆ 6 ರಿಂದ ಸಂಜೆ 6 ರವರೆಗೆ 12 ಗಂಟೆಗಳ ಕಾಲ ಬಂದ್ ನಡೆಯಲಿದೆ. ಆದಾಗ್ಯೂ, ಆಂಬ್ಯುಲೆನ್ಸ್ ಮತ್ತು ಇತರ ಅಗತ್ಯ ಸೇವೆಗಳನ್ನು ಅನುಮತಿಸಲಾಗುವುದು ಎಂದು ತಿಳಿಸಿದೆ.
ಎಸ್ಕೆಎಂನ ಭಾರತ್ ಬಂದ್ ಕರೆಗೆ ವಿವಿಧ ರೈತ ಸಂಘಟನೆಗಳು, ಕಾರ್ಮಿಕ ಸಂಘಗಳು, ವಿದ್ಯಾರ್ಥಿ ಗುಂಪುಗಳು, ವಕೀಲ ಸಂಘಗಳು, ರಾಜಕೀಯ ಪಕ್ಷಗಳು ಮತ್ತು ರಾಜ್ಯ ಸರ್ಕಾರಗಳ ಪ್ರತಿನಿಧಿಗಳು ಬೆಂಬಲ ನೀಡಲಿದ್ದಾರೆ ಎಂದು ಹೇಳಿದರು.