ಬೆಂಗಳೂರು, ಮಾ.25 (DaijiworldNews/MB) : ಸಿಡಿ ಪ್ರಕರಣದಲ್ಲಿ ಷಡ್ಯಂತ್ರ ನಡೆಯುತ್ತಿರುವ ಬಗ್ಗೆ ಹಾಗೂ ಆ ಮಹಾನಾಯಕನ ಬಗ್ಗೆ ನಾನು ಶೀಘ್ರವೇ ಬಹಿರಂಗಪಡಿಸುತ್ತೇನೆ. ನಾನೂ ಸಾಕ್ಷಿ ಸಂಗ್ರಹಿಸಿದ್ದೇನೆ. ಸಿಡಿ ಪ್ರಕರಣದ ಷಡ್ಯಂತ್ರದ ಬಗ್ಗೆ ಮಾಹಿತಿ ಕೇಳಿದ್ರೆ ನೀವು ಶಾಕ್ ಆಗ್ತೀರಿ ಎಂದು ಮಾಜಿ ಸಚಿವ, ಶಾಸಕ ರಮೇಶ ಜಾರಕಿಹೊಳಿ ಹೇಳಿದ್ದಾರೆ.
ಸಂತ್ರಸ್ತ ಯುವತಿ ಇಂದು ಎರಡನೇ ವೀಡಿಯೋ ಬಿಡುಗಡೆ ಮಾಡಿದ್ದಾರೆ. "ನನಗೆ ನನ್ನ ತಂದೆ, ತಾಯಿಯ ಸುರಕ್ಷತೆಯೇ ಮುಖ್ಯ. ಅವರ ಸುರಕ್ಷತೆ ಬಗ್ಗೆ ನನಗೆ ನಂಬಿಕೆ ಬಂದರೆ ನಾನು ಎಸ್ಐಟಿಗೆ ಏನು ಹೇಳಿಕೆ ನೀಡಬೇಕೋ ಅದನ್ನು ನೀಡುತ್ತೇನೆ ಹಾಗೂ ವಿಚಾರಣೆಗೆ ಬರುತ್ತೇನೆ. ಎಸ್ಐಟಿ ಯಾರ ಪರ ಕೆಲಸ ಮಾಡುತ್ತಿದೆ" ಎಂದು ಪ್ರಶ್ನಿಸಿದ್ದರು.
ಈ ಬಗ್ಗೆ ಪ್ರತಿಕ್ರಿಯೆ ನೀಡಿದ ರಮೇಶ್ ಜಾರಕಿಹೊಳಿ, ಇದು ಪಕ್ಕಾ ಷಡ್ಯಂತ್ರ. ನನ್ನ ವಿರುದ್ದವಾಗಿ ಇಂತಹ 10 ಸಿಡಿಗಳು ಬಂದ್ರೂ ನಾನು ಭಯಪಡಲ್ಲ. ನಮ್ಮಲ್ಲಿಯೂ ಕೆಲವು ಬೆಚ್ಚಿ ಬೀಳಿಸುವ ದಾಖಲೆಗಳಿವೆ ಎಂದು ಹೇಳಿದರು.
ಯಾವುದೇ ತಪ್ಪು ಮಾಡದ ನನ್ನ ವಿರುದ್ದ ಷಡ್ಯಂತ್ರ ಹೆಣೆದ ಆ ಮಾಹಾನಾಯಕನ ಹೆಸರು ಶೀಘ್ರವೇ ಬಹಿರಂಗಪಡಿಸಿ, ಆ ಮಹಾನಾಯಕನನ್ನು ಜೈಲಿಗೆ ಹಾಕುವವರೆಗೂ ನಾನು ಸುಮ್ಮನಿರಲಾರೆ. ನಾನು ಖಂಡಿತವಾಗಿಯೂ ನಿರ್ದೋಷಿಯಾಗಿ ಹೊರಬರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇನ್ನು ಈ ವಿಷಯವಾಗಿ ಚರ್ಚೆ ಮಾಡುತ್ತಿರುವವರ ಸಿಡಿಯೂ ನಾಳೆ ಬರಬಹುದು ಎಂದು ಹೇಳಿದರು. ಈ ಸಿಡಿ ಪ್ರಕರಣ ಷಡ್ಯಂತ್ರವೆಂಬ ಬಗ್ಗೆ ನನ್ನ ಬಳಿ ಸಾಕಷ್ಟು ಸಾಕ್ಷಿಗಳಿವೆ. ಈಗ ನನ್ನ ವಕೀಲರು ಹೆಚ್ಚು ಮಾತನಾಡಬೇಡಿ ಎಂದಿದ್ದಾರೆ. ಅದಕ್ಕೆ ನಾನು ಹೆಚ್ಚು ಮಾಹಿತಿ ನಿಮಗೆ ಈಗ ತಿಳಿಸಲ್ಲ ಎಂದೂ ಹೇಳಿದರು.
ವಿಪಕ್ಷ ನಾಯಕ ಸಿದ್ದರಾಮಯ್ಯರ ಮೇಲೆ ನನಗೆ ಗೌರವವಿತ್ತು ಎಂದು ಹೇಳಿದ ಜಾರಕಿಹೊಳಿ ಅವರು, ಆದರೆ ಅವರು ನನ್ನ ವಿರುದ್ದ ಅತ್ಯಾಚಾರದ ಪ್ರಕರಣ ದಾಖಲು ಮಾಡಲು ಹೇಳಿದ್ದಾರೆ. ಈಗ ಅವರ ಮೇಲಿನ ಗೌರವ ಹೋಯಿತು ಎಂದು ಅಸಮಾಧಾನ ವ್ಯಕ್ತಪಡಿಸಿದರು.