ಮುಂಬೈ, ಮಾ.25 (DaijiworldNews/MB) : ಮುಂಬೈ ನಗರ ಪೊಲೀಸ್ ಆಯುಕ್ತ ಹುದ್ದೆಯಿಂದ ತನ್ನನ್ನು ವರ್ಗಾವಣೆ ಮಾಡಿದ ಬಗ್ಗೆ ಹಾಗೂ ಮಹಾರಾಷ್ಟ್ರ ಗೃಹ ಸಚಿವ ಅನಿಲ್ ದೇಶ್ಮುಖ್ ಭ್ರಷ್ಟಚಾರದ ಬಗ್ಗೆ ಸಿಬಿಐ ತನಿಖೆ ನಡೆಸಲು ಕೋರಿ ಮುಂಬೈ ಮಾಜಿ ಪೊಲೀಸ್ ಆಯುಕ್ತ ಪರಮ್ ಬಿರ್ ಸಿಂಗ್ ಬಾಂಬೆ ಹೈ ಕೋರ್ಟ್ ಕದ ತಟ್ಟಿದ್ದಾರೆ.
ಮುಂಬೈ ನಗರದ ಪೊಲೀಸ್ ಆಯುಕ್ತರಾಗಿದ್ದ ಪರಂ ಬೀರ್ ಸಿಂಗ್ ಅವರನ್ನು ಮಹಾರಾಷ್ಟ್ರ ಹೋಮ್ ಗಾರ್ಡ್ನ ಡಿಜಿಯನ್ನಾಗಿ ವರ್ಗಾವಣೆ ಮಾಡಲಾಗಿದೆ. ''ಇದರ ಹಿಂದೆ ಪಿತೂರಿ ಇದೆ. ನನಗೆ ಸಚಿನ್ ವಾಜೆ ಪ್ರಕರಣದ ಬಗ್ಗೆ ತಿಳಿದಿರುವ ಕಾರಣ ನನ್ನನ್ನು ವರ್ಗಾವಣೆ ಮಾಡಲಾಗಿದೆ. ದೇಶ್ಮುಖ್ ತನಿಖೆಯಲ್ಲಿ ಹಸ್ತಕ್ಷೇಪ ಮಾಡುತ್ತಿದ್ದರು, ಮುಂಬೈನ ದಾದ್ರಾ ಮತ್ತು ನಗರ ಹವೇಲಿ ಸಂಸದ ಮೋಹನ್ ಡೆಲ್ಕರ್ ಅವರ ಆತ್ಮಹತ್ಯೆ ಪ್ರಕರಣದಲ್ಲಿ ಬಿಜೆಪಿಯ ಕೈವಾಡವಿದೆ ಎಂದು ಹೇಳುವಂತೆ ಒತ್ತಡ ಹೇರುತ್ತಿದ್ದರು, ವರ್ಗಾವಣೆ ಮತ್ತು ಪೋಸ್ಟಿಂಗ್ ವಿಚಾರದಲ್ಲಿ ಭ್ರಷ್ಟಾಚಾರ ಮಾಡಿದ್ದಾರೆ. ಈಗ ಅಮಾನತುಗೊಂಡಿರುವ ಸಹಾಯಕ ಪೊಲೀಸ್ ಇನ್ಸ್ಪೆಕ್ಟರ್ ಸಚಿನ್ ವಾಝೆ ಅವರಲ್ಲಿ ಪ್ರತಿ ತಿಂಗಳು 100 ಕೋಟಿ ರೂ. ಸಂಗ್ರಹಿಸಲು ಹೇಳಿದ್ದಾರೆ'' ಎಂದು ಪರಮ್ ಬಿರ್ ಸಿಂಗ್ ಆರೋಪಿಸಿದ್ದಾರೆ.
ಈ ಬಗ್ಗೆ ಸುಪ್ರೀಂಕೋರ್ಟ್ ಮೆಟ್ಟಿಲೇರಿದ್ದರು. ಆದರೆ ಬುಧವಾರ ಸುಪ್ರೀಂ ಕೋರ್ಟ್, ''ಈ ಪ್ರಕರಣ ಗಂಭೀರವಾದುದು ಆದರೆ ಹೈಕೋರ್ಟ್ಗೆ ಹೋಗಿ'' ಎಂದು ಹೇಳಿತ್ತು. ಇದೀಗ ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಹೈಕೋರ್ಟ್ಗೆ ಪರಮ್ ಬಿರ್ ಸಿಂಗ್ ಅರ್ಜಿ ಸಲ್ಲಿಸಿದ್ದಾರೆ.