ಬೆಂಗಳೂರು, ಮಾ 25 (DaijiworldNews/MS): ಎಸ್ಐಟಿ ಪೊಲೀಸರು ನೀಡಿದ ನಾಲ್ಕೈದು ನೋಟಿಸ್ಗಳಿಗೆ ಉತ್ತರಿಸದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣದ ಸಂತ್ರಸ್ತೆ ಮತ್ತೊಂದು ವಿಡಿಯೋ ತುಣುಕನ್ನು ಹರಿಯಬಿಟ್ಟಿದ್ದಾರೆ.
ಈ ವಿಡಿಯೋದಲ್ಲಿ "ನಮ್ಮ ತಂದೆ, ತಾಯಿ ಸ್ವಇಚ್ಛೆಯಿಂದ ದೂರು ನೀಡಿಲ್ಲ. ನಾನು ತಪ್ಪೇ ಮಾಡಿಲ್ಲ ಎನ್ನುವುದು 100% ನಮ್ಮ ಪೋಷಕರಿಗೆ ಗೊತ್ತು. ನನಗೆ ನನ್ನ ತಂದೆ, ತಾಯಿಯ ಸುರಕ್ಷತೆಯೇ ಮುಖ್ಯ. ಅವರ ಸುರಕ್ಷತೆ ಬಗ್ಗೆ ನನಗೆ ನಂಬಿಕೆ ಬಂದರೆ ನಾನು ಎಸ್ಐಟಿಗೆ ಏನು ಹೇಳಿಕೆ ನೀಡಬೇಕೋ ಅದನ್ನು ನೀಡುತ್ತೇನೆ ಹಾಗೂ ವಿಚಾರಣೆಗೆ ಬರುತ್ತೇನೆ" ಎಂದು ವಿಡಿಯೋ ಹೇಳಿದ್ದಾರೆ.
"ನನಗೆ ಕಳೆದ 2 ದಿನಗಳಿಂದ ನ್ಯಾಯ ಸಿಗುವ ಭರವಸೆಯಲ್ಲಿದ್ದೇನೆ. ಇದಲ್ಲದೆ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ರಮೇಶ್ ಕುಮಾರ್, ಇತರ ಮಹಿಳಾ ಸಂಘಟನೆಗಳ ಬಳಿ ಕೇಳಿಕೊಳ್ಳುತ್ತಿದ್ದೇನೆ. ನಮ್ಮ ತಂದೆ, ತಾಯಿಗೆ ರಕ್ಷಣೆ ನೀಡಿ. ಅವರು ಸೇಫ್ ಎಂದು ತಿಳಿದ ತಕ್ಷಣ ಎಸ್ಐಟಿ ವಿಚಾರಣೆಗೆ ಹಾಜರಾಗಿ ಹೇಳಿಕೆ ನೀಡುತ್ತೇನೆ".
"ಈ ನಡುವೆ ನಾನು ಮಾರ್ಚ್ 12ರಂದೇ ನಗರ ಪೊಲೀಸ್ ಆಯುಕ್ತರಿಗೆ, ವಿಶೇಷ ತನಿಖಾ ತಂಡಕ್ಕೆ ವಿಡಿಯೋವನ್ನು ಕಳಿಸಿದ್ದೆ. ಆದರೆ ಆ ವಿಡಿಯೋ ನಾನು ಕಳಿಸಿದ್ದ ದಿನ ಬಿಡುಗಡೆ ಆಗಿಲ್ಲ. ಮಾ.13ರಂದು ರಮೇಶ್ ಜಾರಕಿಹೊಳಿರಿಂದ ದೂರು ನೀಡಿದ ಬಳಿಕ ಅರ್ಧ ಗಂಟೆಯ ಬಳಿಕ ವಿಡಿಯೋ ರಿಲೀಸ್ ಆಗಿದೆ. ಹೀಗಾಗಿ ಇಲ್ಲಿ ಏನಾಗುತ್ತಿದೆ ಎಂದು ಅರ್ಥವಾಗುತ್ತಿಲ್ಲ. ಎಸ್ಐಟಿಯವರು ಯಾರ ಪರವಾಗಿದ್ದಾರೆಂದು ಅರ್ಥವಾಗುತ್ತಿಲ್ಲ" ಎಂದು ಸಿಡಿ ಲೇಡಿ ಬಿಡುಗಡೆ ಮಾಡಿದ ಎರಡನೇ ವಿಡಿಯೋದಲ್ಲಿ ಹೇಳಿದ್ದಾರೆ.