ನಾಗ್ಪುರ, ಮಾ.25 (DaijiworldNews/MB) : ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಣಕ್ಕಾಗಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ(ಆರ್ಎಸ್ಎಸ್) ಕಾರ್ಯಕರ್ತರು ಮಹಾರಾಷ್ಟ್ರದ ವಿದರ್ಭ ಪ್ರದೇಶದ 27 ಲಕ್ಷ ಕುಟುಂಬಗಳಿಂದ 57 ಕೋಟಿ ನಿಧಿ ಸಂಗ್ರಹಿಸಿದ್ದಾರೆ.
ಈ ಬಗ್ಗೆ ಬುಧವಾರ ಮಾಧ್ಯಮಗೋಷ್ಠಿ ನಡೆಸಿ ಮಾಹಿತಿ ನೀಡಿದ ಆರ್ಎಸ್ಎಸ್ನ ವಿದರ್ಭ ಪ್ರಾಂತ ಕಾರ್ಯವಾಹ ದೀಪಕ್ ತಮ್ಶೆಟ್ಟಿವಾರ್, ''ರಾಮಮಂದಿರ ನಿರ್ಮಾಣಕ್ಕಾಗಿ ನಿಧಿ ಸಂಗ್ರಹ ಕಾರ್ಯ ಇತ್ತೀಚೆಗೆ ಮುಕ್ತಾಯವಾಗಿದೆ. 7,512 ಮಹಿಳೆಯರು ಸೇರಿದಂತೆ 70,796 ಆರ್ಎಸ್ಎಸ್ ಸ್ವಯಂಸೇವಕರು ವಿದರ್ಭದ 12,310 ಗ್ರಾಮಗಳ 27,67,991 ಕುಟುಂಬಗಳನ್ನು ಭೇಟಿಯಾಗಿ 57 ಕೋಟಿ ನಿಧಿ ಸಂಗ್ರಹ ಮಾಡಿದ್ದಾರೆ. ದೇಶದಲ್ಲಿ ಸುಮಾರು 80 ಸಾವಿರ ಮಹಿಳೆಯರು ಸೇರಿದಂತೆ 20.64 ಲಕ್ಷ ಸ್ವಯಂ ಸೇವಕರು ರಾಮಮಂದಿರ ನಿಧಿ ಸಂಗ್ರಹ ಅಭಿಯಾನದಲ್ಲಿ 5.45 ಲಕ್ಷಕ್ಕೂ ಹೆಚ್ಚು ಹಳ್ಳಿಗಳಲ್ಲಿನ 12.42 ಕೋಟಿಗೂ ಹೆಚ್ಚು ಕುಟುಂಬಗಳನ್ನು ಭೇಟಿಯಾಗಿದ್ದಾರೆ'' ಎಂದು ತಿಳಿಸಿದರು.
''ಈ ಅಭಿಯಾನದಡಿ ದೇಶದಾದ್ಯಂತ ಎಷ್ಟು ಮೊತ್ತ ಸಂಗ್ರಹವಾಗಿದೆ ಎಂಬ ಮಾಹಿತಿ ನಮಗಿಲ್ಲ'' ಎಂದು ಹೇಳಿದ ಅವರು, ''ಮಹಾರಾಷ್ಟ್ರದ ವಿದರ್ಭ ಪ್ರದೇಶದ 27 ಲಕ್ಷ ಕುಟುಂಬಗಳಿಂದ 57 ಕೋಟಿ ನಿಧಿ ಸಂಗ್ರಹ ಮಾಡಲಾಗಿದೆ'' ಎಂದರು.
''ಆರ್ಎಸ್ಎಸ್ನ ಸರಕಾರ್ಯವಾಹರಾಗಿ ಇತ್ತೀಚೆಗೆ ಆಯ್ಕೆಯಾದ ದತ್ತಾತ್ರೇಯ ಹೊಸಬಾಳೆ ಅವರು ಶೀಘ್ರವೇ ನಾಗ್ಪುರದಲ್ಲಿರುವ ಸಂಘದ ಪ್ರಧಾನ ಕಚೇರಿಯಲ್ಲಿ ಕಾರ್ಯ ಆರಂಭ ಮಾಡಲಿದ್ದಾರೆ'' ಎಂದು ಕೂಡಾ ದೀಪಕ್ ತಮ್ಶೆಟ್ಟಿವಾರ್ ತಿಳಿಸಿದರು.