ನವದೆಹಲಿ, ಮಾ.25 (DaijiworldNews/PY): ದೈಹಿಕ ಕ್ಷಮತೆಯ ಆಧಾರದಲ್ಲಿ ತಮಗೆ ಸೇನೆಯಲ್ಲಿ ಶಾಶ್ವತ ಸೇವೆಯ ಅವಕಾಶವನ್ನು ನಿರಾಕರಿಸಿರುವ ಬಗ್ಗೆ ಸುಪ್ರೀಂ ಮೆಟ್ಟಿಲೇರಿರುವ 60 ಮಹಿಳಾ ಸೇನಾ ಅಧಿಕಾರಿಗಳ ಮನವಿಯ ಸಂಬಂಧ ಗುರುವಾರ ಸುಪ್ರೀಂಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.
ಮಹಿಳಾ ಸೇನಾ ಅಧಿಕಾರಿಗಳಿಗೆ ಶಾಶ್ವತ ಸೇವೆಯ ಅವಕಾಶ ಕಲ್ಪಿಸಲು ಸುಪ್ರೀಂ ಕೋರ್ಟ್ ಆದೇಶ ಹೊರಡಿಸಿದ್ದು, ಶಾಶ್ವತ ಸೇವೆಯ ಅವಕಾಶವನ್ನು ನಿರಾಕರಿಸಿರುವ ಬಗ್ಗೆ ಮಹಿಳಾ ಸೇನಾ ಅಧಿಕಾರಿಗಳ ಮನವಿಯನ್ನು ಆಲಿಸಿ ನ್ಯಾಯಾಲಯ ಈ ಆದೇಶವನ್ನು ನೀಡಿದೆ.
ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದ ಪೀಠ ಈ ಆದೇಶ ಹೊರಡಿಸಿದ್ದು, "ಈ ಅರ್ಜಿಯ ಆದೇಶದ ಜೊತೆ ಹಲವು ನಿರ್ದೇಶನಗಳೊಂದಿಗೆ ಅನುಮತಿ ನೀಡಿದ್ದು, ಶಿಸ್ತು ಹಾಗೂ ವಿಜಿಲೆನ್ಸ್ ಕ್ಲಿಯರೆನ್ಸ್ಗೆ ಒಳಪಟ್ಟ ಅಧಿಕಾರಿಗಳು ಶಾಶ್ವತ ಆಯೋಗಕ್ಕೆ ಮುಂದಾಗಬೇಕು" ಎಂದು ತಿಳಿಸಿದೆ.
"ಸೇನೆಯು ಅಳವಡಿಸಿಕೊಂಡ ಮೌಲ್ಯಮಾಪನ ಮಾನದಂಡವು ಮಹಿಳೆಯರನ್ನು ತಾರತಮ್ಯ ಮಾಡುವುದನ್ನು ಒಳಗೊಂಡಿದೆ. ಪುರುಷ ಅಧಿಕಾರಿಯ ಕನಿಷ್ಠ ಅರ್ಹತೆ ಹಾಗೂ ಶೇಪ್-1 ಮಾನದಂಡದಲ್ಲಿ ಇರಬೇಕು ಎನ್ನುವ ಮಾನದಂಡ ಮಹಿಳೆಯರ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ" ಎಂದು ನ್ಯಾಯಪೀಠ ತಿಳಿಸಿದೆ.
ತೋರಿಕೆಯ ಸಮಾನತೆಯ ಸಾಂವಿಧಾನಿಕ ಆಶಯಗಳೊಂದಿಗೆ ಹೊಂದಾಣಿಕೆಯಾಗುವುದಿಲ್ಲ ಎಂದು ಹೇಳಿ ಮಹಿಳಾ ಸೇನಾ ಅಧಿಕಾರಿಗಳಿಗೆ ಸೇನೆಯಲ್ಲಿ ಶಾಶ್ವತ ಸೇವೆಯ ಅವಕಾಶ ನೀಡಿ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದ್ದು, ಈ ಸಂಬಂಧ ಕೇಂದ್ರಕ್ಕೆ ನಿರ್ದೇಶನ ನೀಡಿದೆ.