ಬೆಂಗಳೂರು, ಮಾ.25 (DaijiworldNews/PY): ಸಚಿವ ಸುಧಾಕರ್ ಹೇಳಿಕೆಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ತಿರುಗೇಟು ನೀಡಿದ್ದು, "ವಿಶ್ವೇಶ್ವರ ಹೆಗಡೆ ಮತ್ತು ಸಿಎಂ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಎಲ್ಲರೂ ತಕ್ಷಣ ತಮ್ಮ ವೈವಾಹಿಕ ಸಂಬಂಧವನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು" ಎಂದಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಸಿದ್ದರಾಮಯ್ಯ, "ರಾಜ್ಯದ ಯಾವ ಶಾಸಕರೂ ಏಕಪತ್ನಿವೃತಸ್ಥರಲ್ಲ ಎಂಬ ಸಚಿವ ಸುಧಾಕರ್ ಹೇಳಿಕೆ ಬಿಜೆಪಿ ಶಾಸಕರಿಗೂ ಅನ್ವಯವಾಗುವ ಕಾರಣ, ವಿಧಾನಸಭಾಧ್ಯಕ್ಷರಾದ ವಿಶ್ವೇಶ್ವರ ಹೆಗಡೆ ಮತ್ತು ಸಿಎಂ ಬಿ.ಎಸ್. ಯಡಿಯೂರಪ್ಪ ಸೇರಿದಂತೆ ಎಲ್ಲರೂ ತಕ್ಷಣ ತಮ್ಮ ವೈವಾಹಿಕ ಸಂಬಂಧವನ್ನು ಸಾರ್ವಜನಿಕವಾಗಿ ಸ್ಪಷ್ಟಪಡಿಸಬೇಕು" ಎಂದು ಆಗ್ರಹಿಸಿದ್ದಾರೆ.
"ಸುಧಾಕರ್ ಹೇಳಿಕೆಯನ್ನು ಬಿಜೆಪಿ ಶಾಸಕರು ವಿರೋಧಿಸುವುದಾಗಿದ್ದರೆ ನಮ್ಮ ಪಕ್ಷದ ಶಾಸಕರೆಲ್ಲರೂ ಸ್ವಯೀಚ್ಚೆಯಿಂದ ತನಿಖೆಗೆ ಒಳಪಡಲು ನಿರ್ಧರಿಸಿದಂತೆ ಅವರೂ ಕೂಡಾ ಮುಖ್ಯಮಂತ್ರಿ ಅವರಿಗೆ ತಕ್ಷಣ ಪತ್ರ ಬರೆದು ತಮ್ಮ ಬಗ್ಗೆ ಕೂಡಾ ತನಿಖೆ ನಡೆಯಬೇಕೆಂದು ಮನವಿ ಮಾಡಬೇಕು" ಎಂದು ಒತ್ತಾಯಿಸಿದ್ದಾರೆ.
"ಸಚಿವ ಸುಧಾಕರ್ ಹೇಳಿಕೆಯನ್ನು ಬಿಜೆಪಿ ಶಾಸಕರು ಒಪ್ಪಿಕೊಳ್ಳುವುದಾದರೆ, ರಾಜ್ಯ ಸರ್ಕಾರ ತಕ್ಷಣ ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ಸೆಕ್ಷನ್ 494 ಮತ್ತು 495ರ ಅನ್ವಯ ಕಾನೂನು ಕ್ರಮಕೈಗೊಳ್ಳಬೇಕು.1955ರ ಹಿಂದೂ ವಿವಾಹ ಕಾಯ್ದೆಯಡಿ ಬಹುಪತ್ನಿತ್ವ ಕಾನೂನು ಪ್ರಕಾರ ಅಪರಾಧವಾಗಿದೆ" ಎಂದು ಆರೋಪಿಸಿದ್ದಾರೆ.
"ಯಾರಿಗೆ ಅನೈತಿಕ ಸಂಬಂಧ ಇದೆ, ಯಾರಿಗೆ ವಿವಾಹೇತರ ಸಂಬಂಧ ಇದೆ ಎನ್ನುವ ವಿಚಾರದ ಬಗ್ಗೆ ತನಿಖೆ ಆಗಬೇಕು. ನೈತಿಕತೆ ಪ್ರಶ್ನೆ ಬಂದಾಗ ವಿಪಕ್ಷ ನಾಯಕ ಸಿದ್ದರಾಮಯ್ಯ, ಮಾಜಿ ಸಿಎಂ ಸಿದ್ದರಾಮಯ್ಯ, ರಮೇಶ್ ಕುಮಾರ್, ಕೆಪಿಸಿಸ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮುನಿಯಪ್ಪ ಎಲ್ಲರೂ ಹರಿಶ್ಚಂದ್ರರು, ಏಕಪತ್ನಿವ್ರತಸ್ಥರು, ಸಮಾಜಕ್ಕೆ ಮಾದರಿಯಾದವರು. ಇವರೂ ಕೂಡಾ ತನಿಖೆಗೆ ಒಪ್ಪಿಕೊಳ್ಳಬೇಕು. ನನ್ನನ್ನು ಸೇರಿಸಿ ಎಲ್ಲರ ಬಂಡವಾಳ ಏನೂ ಎಂದು ತಿಳಿಯುತ್ತಿತ್ತು" ಎಂದು ಸಚಿವ ಸುಧಾಕರ್ ಒತ್ತಾಯಿಸಿದ್ದರು.