ಬೆಂಗಳೂರು, ಮಾ.25 (DaijiworldNews/MB) : ಅಶ್ಲೀಲ ಸಿಡಿ ಪ್ರಕರಣದಲ್ಲಿ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಮೊಬೈಲ್ ಫೋನ್ನ ಪರಿಶೀಲನೆ ನಡೆಸಲು ವಿಶೇಷ ತನಿಖಾ ದಳ (ಎಸ್ಐಟಿ) ಅವರ ಮೊಬೈಲ್ ಫೋನ್ ಅನ್ನು ವಶಕ್ಕೆ ಪಡೆದಿದೆ ಎಂದು ವರದಿಯಾಗಿದೆ.
ಈ ನಡುವೆ ಈ ಸಿಡಿಯಲ್ಲಿದ್ದ, ಪ್ರಸ್ತುತ ನಾಪತ್ತೆಯಾಗಿರುವ ಯುವತಿ ಹಾಗೂ ರಮೇಶ್ ಜಾರಕಿಹೊಳಿ ಅವರು ಫೋನ್ ಸಂಪರ್ಕದಲ್ಲಿದ್ದರು. ವಾಟ್ಸ್ಆ್ಯಪ್ ಮತ್ತು ವಿಡಿಯೊ ಕಾಲ್ ಮಾಡುತ್ತಿದ್ದರು ಎಂಬ ಶಂಕೆ ಇದೆ. ರಮೇಶ್ ಅವರು ಈ ಸಿಡಿ ನಕಲಿ ಎಂದು ದೂರಿದ ಬಳಿಕ ವೀಡಿಯೋ ಮೂಲಕ ಕಾಣಿಸಿಕೊಂಡಿದ್ದ ಯುವತಿ, ನನಗೆ ಕೆಲಸ ಕೊಡಿಸುವುದಾಗಿ ರಮೇಶ್ ಜಾರಕಿಹೊಳಿ ಈ ರೀತಿ ಮಾಡಿದ್ದಾರೆ. ಅವರೇ ಈ ವೀಡಿಯೋ ವೈರಲ್ ಮಾಡಿದ್ದಾರೆ ಎಂದೂ ಆರೋಪಿಸಿದ್ದಳು.
ಇನ್ನು ರಮೇಶ್ ಈ ಬಗ್ಗೆ ತನಿಖೆ ಆಗಬೇಕೆಂದು ಆಗ್ರಹಿಸಿದ ಬಳಿಕ ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ತನಿಖೆಗೆ ಆದೇಶಿಸಿದ್ದರು. ಹೆಚ್ಚುವರಿ ಪೊಲೀಸ್ ಆಯುಕ್ತ ಸೌಮೇಂದು ಮುಖರ್ಜಿ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದ್ದು ಪ್ರಸ್ತುತ ಈ ತಂಡ ತನಿಖೆ ನಡೆಸುತ್ತಿದೆ.
ಏತನ್ಮಧ್ಯೆ ಸಿಡಿ ಯುವತಿ ನಾಪತ್ತೆಯಾಗಿದ್ದಾಳೆ. ಆಕೆಯ ಪತ್ತೆಗೆ ಈ ತಂಡ ಬಲೆ ಬೀಸಿದೆ. ಆದರೆ ಆಕೆ ಹಾಗೂ ಆಕೆಯ ಸಹಚರರು ಆಗಾಗೇ ಸ್ಥಳ ಬದಲಾವಣೆ ಮಾಡುತ್ತಿದ್ದಾರೆ. ಈ ಹಿನ್ನೆಲೆ ಅವರನ್ನು ಟ್ರೇಸ್ ಮಾಡಲು ಆಗುತ್ತಿಲ್ಲ ಎಂದು ಕೂಡಾ ಹೇಳಲಾಗಿದೆ.
ಪ್ರಸ್ತುತ ಈ ಸಿಡಿ ಎಲ್ಲಿ ತಯಾರಾಗಿದೆ, ಅಪ್ಲೋಡ್ ಎಲ್ಲಿಂದ ಮಾಡಲಾಗಿದೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿರುವ ಎಸ್ಐಟಿ ತಂಡ ರಮೇಶ್ ಜಾಕೊಹೊಳಿ ಅವರು ಮೊಬೈಲ್ ಫೋನ್ ತನಿಖೆಗೆ ನೀಡಲು ಸಮ್ಮತಿಸಿದ ಬಳಿಕ ಬುಧವಾರ ರಾತ್ರಿ ಮೊಬೈಲ್ ಫೋನ್ ವಶಕ್ಕೆ ಪಡೆದಿದ್ದಾರೆ. ಇನ್ನು ಈ ಮೊಬೈಲ್ ಫೋನ್ ಹೆಚ್ಚಿನ ಪರಿಶೀಲನೆಗಾಗಿ ಎಫ್ಎಸ್ಎಲ್ಗೆ ಕಳುಹಿಸಲಾಗುತ್ತದೆ ಎಂದು ತಿಳಿದು ಬಂದಿದೆ.