ಕುದೂರು, ಮಾ 25 (DaijiworldNews/MS): ಮಂಗಳೂರು ಮೂಲದ ಯುವಕರಿಬ್ಬರು ರಸ್ತೆ ಬದಿಯಲ್ಲಿ ಕಾರು ನಿಲ್ಲಿಸಿ ಜಗಳವಾಡುತ್ತಿದ್ದು, ಬಿಡಿಸಲು ಹೋದ ಸ್ಥಳೀಯರ ಮೇಲೆ ಮಾರಕಾಸ್ತ್ರದಿಂದ ದಾಳಿ ನಡೆಸಿದ ಪರಿಣಾಮ ಗ್ರಾಮಸ್ಥರೆಲ್ಲರೂ ಸೇರಿ ಇಬ್ಬರನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿ ಪೊಲೀಸರಿಗೊಪ್ಪಿಸಿದ ಘಟನೆ ಕುದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ
ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ಬರುವ ಸೂರಪ್ಪನ ಹಳ್ಳಿಯಲ್ಲಿ ಮಂಗಳೂರಿನ ಸುದರ್ಶನ ಪೈ ಮತ್ತು ಮಹಮ್ಮದ್ ಅನ್ನೀಸ್ ಅವರು ರಸ್ತೆಬದಿಯಲ್ಲಿ ಕಾರಿನಲ್ಲಿ ಒಬ್ಬರಿಗೊಬ್ಬರು ಕಿತ್ತಾಡುತ್ತಿದ್ದರು. ಕಾರಿನಲ್ಲಿ ಕಿತ್ತಾಡುತ್ತಿದ್ದ ಯುವಕರ ಜಗಳ ಬಿಡಿಸಲು ಹೋದ ಸ್ಥಳೀಯರಾದ ರಾಮಾಂಜನೇಯ ಮತ್ತು ಅವರ ಮಗ ಮುದ್ದಹನುಮಯ್ಯ ಜಗಳ ಬಿಡಿಸಲು ಮುಂದಾದರು. ಆದರೆ ಈ ಯುವಕರು ಅಪ್ಪ-ಮಗನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದರು.
ಹಲ್ಲೆ ಮಾಡಿದ ವಿಷಯ ತಿಳಿದು ಹೆಚ್ಚಿನ ಸಂಖ್ಯೆಯಲ್ಲಿ ಸ್ಥಳಕ್ಕೆ ದೌಡಾಯಿಸಿದ ಉದ್ರಿಕ್ತ ಗ್ರಾಮಸ್ಥರು ಕಾರಿನಲ್ಲಿದ್ದ ಸುದರ್ಶನ ಪೈ ಮತ್ತು ಮಹಮ್ಮದ್ ಅನ್ನೀಸ್ ಇಬ್ಬರನ್ನು ಮರಕ್ಕೆ ಕಟ್ಟಿಹಾಕಿ ಹಿಗ್ಗಾಮುಗ್ಗ ಜಾಡಿಸಿ ಪೊಲೀಸರಿಗೊಪ್ಪಿಸಿದ್ದಾರೆ.