ತಿರುವನಂತಪುರಂ, ಮಾ.21 (DaijiworldNews/HR): ಕೇರಳ ವಿಧಾನಸಭಾ ಚುನಾವಣೆ ಏಪ್ರಿಲ್ 6ರಂದು ನಡೆಯಲಿದ್ದು, ರಾಜ್ಯದ ತಲಚೇರಿ, ಗುರುವಾಯುರ್ ಮತ್ತು ದೇವಿಕುಲಂ ವಿಧಾನಸಭಾ ಕ್ಷೇತ್ರಗಳಿಗೆ ಬಿಜೆಪಿ ಅಭ್ಯರ್ಥಿಗಳು ಸಲ್ಲಿಸಿದ ನಾಮಪತ್ರ ತಿರಸ್ಕರಿಸಲಾಗಿದೆ ಎಂದು ತಿಳಿದು ಬಂದಿದೆ.

ಕಣ್ಣೂರು ಜಿಲ್ಲೆಯ ತಲಚೇರಿ, ಗುರುವಾಯುರ್ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳು ಅಗತ್ಯ ದಾಖಲೆಗಳನ್ನು ಒದಗಿಸದ ಕಾರಣಕ್ಕೆ ನಾಮಪತ್ರ ತಿರಸ್ಕರಿಸಲಾಗಿದ್ದು, ಇಡುಕ್ಕಿ ಜಿಲ್ಲೆಯ ದೇವಿಕುಲಂ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಬೆಂಬಲಿತ ಎಐಎಡಿಎಂಕೆ ಅಭ್ಯರ್ಥಿ ಆರ್ ಎಂ ಧನಲಕ್ಷ್ಮಿ ಅವರು ನಾಮಪತ್ರದ ಸಂದರ್ಭದಲ್ಲಿ ಅರ್ಜಿಗಳನ್ನು ಸರಿಯಾದ ರೀತಿಯಲ್ಲಿ ಭರ್ತಿ ಮಾಡದ ಕಾರಣಕ್ಕೆ ನಾಮಪತ್ರ ತಿರಸ್ಕೃತಗೊಂಡಿದೆ ಎನ್ನಲಾಗಿದೆ.
"ಕಣ್ಣೂರು ಜಿಲ್ಲೆಯ ಬಿಜೆಪಿ ಜಿಲ್ಲಾಧ್ಯಕ್ಷ ಎನ್ ಹರಿದಾಸ್ ಅವರಿಗೆ ತಲಚೇರಿ ವಿಧಾನಸಭಾ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದ್ದು, ಅವರು ಸಲ್ಲಿಸಿದ ನಾಮಪತ್ರ ತಿರಸ್ಕೃತಗೊಂಡಿದೆ. ಇದರಿಂದ 2016ರಲ್ಲಿ ಬಿಜೆಪಿ ಅತಿಹೆಚ್ಚು ಮತಗಳನ್ನು ಪಡೆದ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯೇ ಇಲ್ಲದಂತಾಗಿದೆ.
ಇನ್ನು ಈ ನಿರ್ಧಾರವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್ ಮೊರೆ ಹೋಗುವುದಾಗಿ ಎನ್ ಹರಿದಾಸ್ ತಿಳಿಸಿದ್ದಾರೆ.