ಶಿಡ್ಲಘಟ್ಟ, ಮಾ.20 (DaijiworldNews/MB) : ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ್ಟ ನಗರದ ಪೊಲೀಸ್ ಠಾಣೆ ಬಳಿಯಲ್ಲಿಯೇ ಕಾಂಗ್ರೆಸ್ ಮುಖಂಡ ಅಮ್ಜದ್ ಎಂಬವರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದಿದ್ದಾರೆ.

ಕಾಂಗ್ರೆಸ್ ಮುಖಂಡ ಅಮ್ಜದ್ ಅವರು, ಶಿಡ್ಲಘಟ್ಟ ದಿಬ್ಬೂರಹಳ್ಳಿ ಮಾರ್ಗ ಮಧ್ಯೆ ದ್ವಿಚಕ್ರ ವಾಹನದಲ್ಲಿ ತೆರಳುತ್ತಿದ್ದ ಸಂದರ್ಭ ದುಷ್ಕರ್ಮಿಗಳು ವಾಹನಕ್ಕೆ ಡಿಕ್ಕಿ ಹೊಡೆದಿದ್ದಾರೆ. ಬಳಿಕ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆಗೈದು ಪರಾರಿಯಾಗಿದ್ದಾರೆ. ಈ ವೇಳೆ ಸಮೀಪವೇ ಇದ್ದ ಪೊಲೀಸ್ ಠಾಣೆಯಲ್ಲಿ ಕರ್ತವ್ಯದಲ್ಲಿದ್ದ ಆರಕ್ಷಕ ಸಿಬ್ಬಂದಿ ದುಷ್ಕರ್ಮಿಗಳನ್ನು ಹಿಡಿಯುವ ಯತ್ನ ಮಾಡಿದ್ದು ಸಫಲವಾಗಿಲ್ಲ ಎಂದು ವರದಿಯಾಗಿದೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿದ ಚಿಕ್ಕಬಳ್ಳಾಪುರ ಜಿಲ್ಲಾ ವರಿಷ್ಠಾಧಿಕಾರಿ ಮಿಥುನ್ ಕುಮಾರ್ ಮಾತನಾಡಿ, ''ದುಷ್ಕರ್ಮಿಗಳು ಅಮ್ಜದ್ ಎಂಬವರನ್ನು ನಗರದ ರೈಲ್ವೆ ಕೆಳಸೇತುವೆ ಬಳಿ ಹತ್ಯೆಗೈದು ಪರಾರಿಯಾಗಿದ್ದು ಆರೋಪಿಗಳ ಸುಳಿವು ದೊರೆತಿದೆ. ಶೀಘ್ರವೇ ಅವರ ಬಂಧನ ಮಾಡಲಾಗುತ್ತದೆ'' ಎಂದು ತಿಳಿಸಿದ್ದಾರೆ.