ಕೊಡಗು, ಮಾ 20(DaijiworldNews/MS): ಜಿಲ್ಲೆಯ ಪೊನ್ನಂಪೇಟೆಯ ಜನತೆಯ ಆತಂಕಕ್ಕೆ ಕಾರಣವಾಗಿದ್ದ, ಹಾಗೂ ಮೂವರನ್ನು ಬಲಿ ಪಡೆದಿದ್ದ ನರಭಕ್ಷಕ ಹುಲಿ ಕೊನೆಗೂ ಅರಣ್ಯ ಇಲಾಖೆಯ ಗುಂಡೇಟಿಗೆ ಬಲಿಯಾಗಿದೆ.

ರಾಷ್ಟ್ರೀಯ ಹುಲಿ ಅಭಯಾರಣ್ಯ ನಾಗರಹೊಳೆಯಿಂದ ಪೊನ್ನಂಪೇಟೆ ತಾಲೂಕಿನ ಗ್ರಾಮಗಳಿಗೆ ಬಂದಿದ್ದ ಹುಲಿ ಹತ್ತಾರು ಜಾನುವಾರಗಳ ಜೊತೆಗೆ ಮೂರು ಜನರನ್ನು ಕೊಂದು ಹಾಕಿತ್ತು. ಹೀಗಾಗಿ ಸ್ಥಳೀಯರು, ರೈತರು ಹುಲಿಯನ್ನು ಸೆರೆ ಹಿಡಿಯುವಂತೆ ಪ್ರತಿಭಟನೆ ನಡೆಸಿದ್ದರು.
ಗುರುವಾರ ಬೆಳಗ್ಗೆ ಅರಣ್ಯ ಇಲಾಖೆ ಸಿಬ್ಬಂದಿ ಕಾರ್ಯಾಚರಣೆ ಆರಂಭಿಸಿದ್ದರು. ಮಧ್ಯಾಹ್ನ 12 ಗಂಟೆಗೆ ಅರಣ್ಯ ಇಲಾಖೆ ಸಿಬ್ಬಂದಿ ಗುಂಡಿಗೆ ಬಲಿಯಾಗಿದೆ. ಮಾರ್ಚ್ 8 ರಂದು ಹುಲಿಗೆ ಶೂಟ್ ಮಾಡಿದಾಗ ಹಣೆಗೆ ಗುಂಡೇಟು ಬಿದ್ದಿತ್ತು. ಸತ್ತಿರುವ ಹುಲಿಯ ದೇಹದಲ್ಲೂ ಗುಂಡೇಟು ಇದೆ. ಆದ್ದರಿಂದ ಮನುಷ್ಯರನ್ನು ಕೊಂದಿರುವ ಹುಲಿಯೇ ಇದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.
ಈ ಹುಲಿಯೂ ಫೆಬ್ರವರಿ 20 ರ ಸಂಜೆ ಕುಮಟೂರಿನಲ್ಲಿ 14 ವರ್ಷದ ಬಾಲಕ ಅಯ್ಯಪ್ಪನ್ನು ಕೊಂದು ಹಾಕಿತ್ತು, ಮಾರನೇ ದಿನ ಮುಂಜಾನೆಯೇ ವೃದ್ದೆ ಚಿಣ್ಣಿಯನ್ನು ದಾಳಿ ನಡೆಸಿ ಕೊಂದು ಹಾಕಿತ್ತು. ಮತ್ತೆ ಮಾರ್ಚ್ 8 ರಂದು ಬೆಳ್ಳೂರಿನಲ್ಲಿ 8 ವರ್ಷದ ಬಾಲಕ ರಂಗಸ್ವಾಮಿಯನ್ನು ಕೊಂದು, ವೃದ್ದ ಕೆಂಚಪ್ಪನನ್ನು ಗಂಭೀರವಾಗಿ ಗಾಯಗೊಳಿಸಿತ್ತು.