ಮುಂಬೈ, ಮಾ.19 (DaijiworldNews/HR): ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವುದು ಕುಂಭಕರ್ಣ ಸರ್ಕಾರ. ರೈತರ ಪ್ರತಿಭಟನೆ, ಇಂಧನ ದರ ಹೆಚ್ಚಳ, ನಿರುದ್ಯೋಗ ಸಮಸ್ಯೆಗಳ ಬಗ್ಗೆ ಈ ಸರ್ಕಾರವನ್ನು ಎಚ್ಚರಿಸುವುದು ಹೇಗೆ" ಎಂದು ಮಹಾರಾಷ್ಟ್ರ ಸಚಿವ, ಎನ್ಸಿಪಿ ನಾಯಕ ಜಯಂತ್ ಪಾಟೀಲ್ ಹೇಳಿದ್ದಾರೆ.

ಈ ಕುರಿತು ಟ್ವೀಟ್ ಮಾಡಿರುವ ಅವರು, "ಕೃಷಿ ಕಾಯ್ದೆಗಳ ವಿರುದ್ಧ ನಡೆಯುತ್ತಿರುವ ಪ್ರತಿಭಟನೆ ವೇಳೆ ಈವರೆಗೆ ಮುನ್ನೂರಕ್ಕೂ ಹೆಚ್ಚು ರೈತರು ಮೃತಪಟ್ಟಿದ್ದು, ಸಾವಿರಾರು ಯುವಕರು ಪ್ರತಿದಿನ ಉದ್ಯೋಗ ಕಳೆದುಕೊಳ್ಳುತ್ತಿದ್ದಾರೆ. ಪೆಟ್ರೋಲ್, ಡೀಸೆಲ್ ಹಾಗೂ ಎಲ್ಪಿಜಿ ದರಗಳು ಗರಿಷ್ಠ ಮಟ್ಟ ತಲುಪಿವೆ. ದೇಶದ ಹಣಕಾಸು ಪರಿಸ್ಥಿತಿ ಐಸಿಯುನಲ್ಲಿದೆ. ಕುಂಭಕರ್ಣ ಸರ್ಕಾರವನ್ನು ಎಬ್ಬಿಸುವುದು ಹೇಗೆ" ಎಂದು ಹೇಳಿದ್ದಾರೆ.
ಇನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿರುವ ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಹಾಗೂ ಕನಿಷ್ಠ ಬೆಂಬಲ ಬೆಲೆಗೆ ಕಾತರಿ ನೀಡುವಂತೆ ಆಗ್ರಹಿಸಿ ನೂರಾರು ರೈತರು ಕಳೆದ ನವೆಂಬರ್ನಿಂದ ದೆಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ.