ಪಶ್ಚಿಮ ಬಂಗಾಳ, ಮಾ16 (DaijiworldNews/MS): ರಣ ಕಣವಾಗಿರುವ ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣಾ ಹೊಸ್ತಿಲಿನಲ್ಲೇ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ನಡುವಿನ ವಾಕ್ಸಮರಕ್ಕೆ ಸಾಕ್ಷಿಯಾಯಿತು.

ನಂದಿಗ್ರಾಮದಲ್ಲಿನ ಘಟನೆಯ ಬಳಿಕ ಪುರುಲಿಯಾದ ಬಾಘಮುಂಡಿಯಲ್ಲಿ ವ್ಹೀಲ್ ಚೇರ್ ನಲ್ಲಿ ಕುಳಿತುಕೊಂಡೇ ತೃಣಮೂಲ ಕಾಂಗ್ರೆಸ್ ಮುಖ್ಯಸ್ಥ ಮಮತಾ ಬ್ಯಾನರ್ಜಿ ಮೊದಲ ರ್ಯಾಲಿ ನಡೆಸಿದರು. "ನಾನು ಗಾಯಗೊಂಡ ಬಳಿಕ ಬಹಳಷ್ಟು ಜನರು, ನಾನು ಮನೆಯಿಂದ ಹೊರಬರಲು ಸಾಧ್ಯವೇ ಇಲ್ಲ ಅಂದುಕೊಂಡಿದ್ದರು. ಜನರನ್ನು ತಲುಪುವುದನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲ. ನಾನು ಹಲವು ಸಂದರ್ಭಗಳಲ್ಲಿ ಇಂಥ ದಾಳಿಗಳನ್ನು ಮತ್ತು ಗಾಯಗಳನ್ನು ಎದುರಿಸಿದ್ದೇನೆ. ವೀಲ್ ಚೇರ್ ನಲ್ಲಿಯೇ ನಾನು ರಾಜ್ಯದಾದ್ಯಂತ ಪ್ರಯಾಣಿಸುತ್ತೇನೆ. ದಾಳಿಯಿಂದ ನಾನು ಕೆಳಗಿಳಿಯುವುದಿಲ್ಲ. ಪಶ್ಚಿಮ ಬಂಗಾಳದಿಂದ ಬಿಜೆಪಿಯನ್ನು ಓಡಿಸುವುದಕ್ಕೆ ನನ್ನ ಒಂದು ಕಾಲು ಸಾಕು" ಎಂದು ದೀದಿ ಗುಡುಗಿದರು.
ಇದೇ ವೇಳೆ ಚುನಾವಣಾ ಅಖಾಡಕ್ಕೆ ಸಕ್ರಿಯರಗಿರುವಂತೆ ಯುವ ಬೆಂಬಲಿಗರನ್ನು ಪ್ರೋತ್ಸಾಹಿಸಿದ ಮಮತಾ, "ಸುಮ್ಮನೆ ಕುಳಿತುಕೊಳ್ಳಬೇಡಿ. ನಾನು ಮುರಿದ ಕಾಲಿನಿಂದ ಹೋರಾಡಲು ಸಾಧ್ಯವಾದರೆ, ನಿಮ್ಮಿಂದ ಯಾಕೆ ಸಾಧ್ಯವಿಲ್ಲ?" ಎಂದರು.
ಪಶ್ಚಿಮ ಬಂಗಾಳದಲ್ಲಿ ಎಂಟು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ಮಾರ್ಚ್.27, ಏಪ್ರಿಲ್.1, ಏಪ್ರಿಲ್.6, ಏಪ್ರಿಲ್.10, ಏಪ್ರಿಲ್.17, ಏಪ್ರಿಲ್.22, ಏಪ್ರಿಲ್.26 ಮತ್ತು ಏಪ್ರಿಲ್.29ರಂದು ಮತದಾನ ನಡೆಯಲಿದೆ. ಚುನಾವಣೆಯ ಅಂತಿಮ ಫಲಿತಾಂಶ ಮೇ.2ರಂದು ಹೊರ ಬೀಳಲಿದೆ.