ಬೆಂಗಳೂರು, ಮಾ 15(DaijiworldNews/MS): ಕೇರಳದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲು ಪಕ್ಷ ಟಿಕೆಟ್ ನಿರಾಕರಿಸಿದ ಹಿನ್ನೆಲೆಯಲ್ಲಿ ಕೇರಳ ಕಾಂಗ್ರೆಸ್ ಮಹಿಳಾ ಘಟಕದ ಮುಖ್ಯಸ್ಥೆ ಲತಿಕಾ ಸುಭಾಷ್ ಅವರು ಭಾನುವಾರ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ , ತಲೆಕೂದಲು ಬೋಳಿಸಿಕೊಂಡು ಪ್ರತಿಭಟನೆ ನಡೆಸಿದ್ದಾರೆ.

ಏಪ್ರಿಲ್ 6ರಂದು ನಡೆಯುವ ಚುನಾವಣೆಗೆ ಕೇರಳ ಕಾಂಗ್ರೆಸ್ ಘಟಕವು 86 ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಬಿಡುಗಡೆ ಮಾಡಿದೆ. ಇದರಲ್ಲಿರುವ ಮಹಿಳಾ ಅಭ್ಯರ್ಥಿಗಳ ಸಂಖ್ಯೆ 9 ಮಾತ್ರ. ಲತಿಕಾ ಅವರು, ಏಟ್ಟುಮಾನೂರು ಕ್ಷೇತ್ರದಿಂದ ಟಿಕೆಟ್ ಬಯಸಿದ್ದರು.
ಪಟ್ಟಿಯಲ್ಲಿ ಮಹಿಳಾ ಅಭ್ಯರ್ಥಿಗಳ ಅಸಮರ್ಪಕ ಪ್ರಾತಿನಿಧ್ಯವನ್ನು ವಿರೋಧಿಸಿ 55 ವರ್ಷದ ಹಿರಿಯ ನಾಯಕಿ ಕಾಂಗ್ರೆಸ್ ಕಚೇರಿಯ ಮುಂದೆ ತಲೆ ಬೋಳಿಸಿಕೊಂಡು ಪ್ರತಿಭಟನೆ ನಡೆಸಿದ್ದಾರೆ. ಸುದೀರ್ಘ ವರ್ಷಗಳಿಂದ ಪಕ್ಷಕ್ಕೆ ಸೇವೆ ಸಲ್ಲಿಸಿದ ಮಹಿಳೆಯರನ್ನು ಪಕ್ಷವು ನಿರ್ಲಕ್ಷಿಸುತ್ತಿದೆ ಎಂದು ಅವರು ಆರೋಪಿಸಿದರು.
'ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆಯಿಂದ ಅಸಮಾಧಾನವಾಗಿದೆ. ಮಹಿಳೆಯರಿಗೆ ಶೇ 20ರಷ್ಟು ಸೀಟುಗಳನ್ನು ಕೇಳಿದ್ದೆವು. ಪಕ್ಷಕ್ಕಾಗಿ ದುಡಿದ ಮಹಿಳೆಯರನ್ನು ಕಡೆಗಣಿಸಿ, ಬೇರೆಯವರಿಗೆ ಟಿಕೆಟ್ ನೀಡಲಾಗಿದೆ. ಒಂದು ಟಿಕೆಟ್ ಪಡೆಯಲೂ ಸಾಧ್ಯವಿಲ್ಲದ ಈ ಹುದ್ದೆಯಲ್ಲಿ ಇದ್ದು, ಏನು ಮಾಡುವುದು? ಹೀಗಾಗಿ ರಾಜೀನಾಮೆ ನೀಡಿದ್ದೇನೆ. ಮಹಿಳೆಯರನ್ನು ಕಡೆಗಣಿಸಿದ್ದನ್ನು ಪ್ರತಿಭಟಿಸಿ, ತಲೆಯ ಕೂದಲು ತೆಗೆಸಿಕೊಂಡಿದ್ದೇನೆ' ಎಂದು ಅವರು ಹೇಳಿದ್ದಾರೆ.
ಬೇರೆ ಯಾವುದೇ ಪಕ್ಷಕ್ಕೆ ಸೇರುವ ಯೋಜನೆ ಇಲ್ಲ ಆದರೆ ವಿಧಾನಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸುವುದಾಗಿ ಸುಭಾಷ್ ಘೋಷಿಸಿದ್ದಾರೆ. ಈ ನಡುವೆ
ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಮುಲ್ಲಪ್ಪಲ್ಲಿ ರಾಮಚಂದ್ರನ್ ಘಟನೆ ಬಗ್ಗೆ ಪ್ರತಿಕ್ರಿಯಿಸಿದ್ದು, ಅವರನ್ನು ಕಡೆಗಣಿಸಲಾಗಿದೆ ಎಂಬ ಆರೋಪವನ್ನು ತಿರಸ್ಕರಿಸಿದರು.
ಅವರು ಯಾವಾಗಲೂ ಬಹಳ ವಿಧೇಯ ಪಕ್ಷದ ಕಾರ್ಯಕರ್ತರಾಗಿದ್ದು ಕಾಂಗ್ರೆಸ್ ಅವರನ್ನು ಎಂದಿಗೂ ಕಡೆಗಣಿಸಿಲ್ಲ ಎಂದು ಅವರು ಹೇಳಿದರು.