ನವದೆಹಲಿ, ಮಾ.14 (DaijiworldNews/MB) : ಇಂಧನ ಬೆಲೆ ಗಗನಕ್ಕೇರಿರುವ ವಿಚಾರವಾಗಿ ಕೇಂದ್ರ ಸರ್ಕಾರದ ವಿರುದ್ದ ಕಾಂಗ್ರೆಸ್ ಮುಖಂಡ, ಸಂಸದ ರಾಹುಲ್ ಗಾಂಧಿ ಅವರು ವಾಗ್ದಾಳಿ ನಡೆಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ''ಹಗಲು ಹೊತ್ತಿನಲ್ಲಿಯೇ ಕೇಂದ್ರ ಸರ್ಕಾರದಿಂದ ಎರಡೂ ಕೈಗಳಿಂದ ಲೂಟಿ ಮಾಡಿದೆ. ಗ್ಯಾಸ್-ಡೀಸೆಲ್-ಪೆಟ್ರೋಲ್ ಮೂಲಕ ಅಧಿಕ ತೆರಿಗೆ ಸಂಗ್ರಹ ಮಾಡುವುದು, ಸ್ನೇಹಿತರಿಗೆ ಪಿಎಸ್ಯು-ಪಿಎಸ್ಬಿ ಮಾರಾಟ ಮಾಡುವ ಮೂಲಕ ಸಾರ್ವಜನಿಕರಿಂದ ಉದ್ಯೋಗ ಮತ್ತು ಸೌಲಭ್ಯಗಳನ್ನು ಕಸಿದುಕೊಳ್ಳುವ ಕಾರ್ಯ ಕೇಂದ್ರ ಸರ್ಕಾರ ಮಾಡುತ್ತಿದೆ. ದೇಶವನ್ನು ಮಾರಿ ಸ್ನೇಹಿತರಿಗೆ ಸವಲತ್ತು ನೀಡುವುದು ಪಿಎಂ ನಿಯಮವಾಗಿದೆ'' ಎಂದು ಹೇಳಿದ್ದಾರೆ.
ಪೆಟ್ರೋಲ್ ಮತ್ತು ಡೀಸೆಲ್ನ ಬೆಲೆ 2021 ರಲ್ಲಿ 26 ಪಟ್ಟು ಏರಿಕೆಯಾಗಿ ವರ್ಷದಲ್ಲಿ ಕ್ರಮವಾಗಿ 7.46 ರೂ ಮತ್ತು 7.60 ರೂ. ಏರಿಕೆ ಕಂಡಿದೆ. ಪೆಟ್ರೋಲ್ ಬೆಲೆಯು ಹಲವಾರು ನಗರಗಳಲ್ಲಿ ಲೀಟರ್ಗೆ 100 ರೂ. ದಾಟಿದೆ.
ಹೆಚ್ಚುತ್ತಿರುವ ಇಂಧನ ಬೆಲೆಗಳು ಭಾರತದಲ್ಲಿ ಇಂಧನ ಬೇಡಿಕೆಯ ಮೇಲೆ ಪರಿಣಾಮ ಬೀರುತ್ತಿವೆ. ಅಧಿಕೃತ ಅಂಕಿಅಂಶಗಳ ಪ್ರಕಾರ, ಫೆಬ್ರವರಿಯಲ್ಲಿ ದೇಶದಲ್ಲಿ ಇಂಧನ ಬೇಡಿಕೆ ತೀವ್ರವಾಗಿ ಕುಸಿದಿದೆ.