ಲಕ್ನೋ, ಮಾ. 14 (DaijiworldNews/HR): "ಕಳೆದ ನಾಲ್ಕು ವರ್ಷದಲ್ಲಿ ಉತ್ತರ ಪ್ರದೇಶ ಸರ್ಕಾರ ನಾಲ್ಕು ಲಕ್ಷ ಮಂದಿಗೆ ಉದ್ಯೋಗ ನೀಡಿದೆ" ಎಂದು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಈ ಕುರಿತು ಶಿಕ್ಷಣ ಇಲಾಖೆಯ ಕ್ಷೇತ್ರಾಧಿಕಾರಿಗಳಿಗೆ ನೇಮಕಗೊಂಡ ಅಭ್ಯರ್ಥಿಗಳಿಗೆ ಲಕ್ನೋದ ಲೋಕಭವನ್ನಲ್ಲಿ ನಡೆದ ಕಾರ್ಯಕ್ರಮದಲ್ಲಿ ನೇಮಕಾತಿ ಪತ್ರ ನೀಡಿ ಮಾತನಾಡಿದ ಅವರು, "ನಮ್ಮ ಸರ್ಕಾರದ ನಾಲ್ಕು ವರ್ಷಗಳ ಅವಧಿಯಲ್ಲಿ 4 ಲಕ್ಷ ಯುವಕರಿಗೆ ಸರ್ಕಾರಿ ಉದ್ಯೋಗ ನೀಡಲಾಗಿದೆ" ಎಂದರು.
ಇನ್ನು "ಈ ಹಿಂದೆ ಉತ್ತರ ಪ್ರದೇಶ ಲೋಕಸೇವಾ ಆಯೋಗ ಜಾತಿ, ಪ್ರಾದೇಶಿಕತೆ, ಅಭಿಪ್ರಾಯ ಹಾಗೂ ವಿವಿಧ ಧರ್ಮಗಳನ್ನು ಆಧರಿಸಿ ನೇಮಕಾತಿ ಮಾಡುತ್ತಿದ್ದು, ಅದರಲ್ಲಿ ಸಾಕಷ್ಟು ದುರುಪಯೋಗಗಳಾಗುತ್ತಿದ್ದವು, ಹಣ ಮತ್ತು ತೋಳ್ಬಲದ ಪ್ರಭಾವ ನಡೆಯುತ್ತಿತ್ತು" ಎಂದಿದ್ದಾರೆ.
ಆದರೆ ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಪಾರದರ್ಶಕತೆ ಪಾಲನೆ ಮಾಡಿ ಸರ್ಕಾರಿ ಉದ್ಯೋಗಗಳಿಗೆ ನೇಮಕಾತಿ ಮಾಡಲಾಗುತ್ತಿದ್ದು, ಭ್ರಷ್ಟಾಚಾರದ ವಿರುದ್ಧ ದೂರುಗಳು ಕೇಳಿ ಬಂದರೆ ಅಂತಹವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಅದರ ಪರಿಣಾಮ ಯಾವ ಯುವಕರೂ ಅವಕಾಶ ವಂಚಿತರಾಗುತ್ತಿಲ್ಲ. ಭ್ರಷ್ಟಾಚಾರ ಕಡಿಮೆಯಾಗುತ್ತಿದೆ ಎಂದು ಹೇಳಿದ್ದಾರೆ.