ಮಧ್ಯಪ್ರದೇಶ , ಮಾ.14 (DaijiworldNews/PY): "17 ರ ಬಾಲಕನಿಗೆ ಥಳಿಸಿ, ಸಿಗರೇಟ್ ಸೇದುವಂತೆ ಹಾಗೂ ಬೂಟ್ ನೆಕ್ಕುವಂತೆ ಮಾಡಿದ ಅಮಾನವೀಯ ಘಟನೆ ಮಧ್ಯಪ್ರದೇಶದ ಜಬಲ್ಪುರದಲ್ಲಿ ನಡೆದಿದ್ದು, ನಾಲ್ವರು ಅಪರಾಧಿಗಳ ಪೈಕಿ ಓರ್ವನನ್ನು ಬಂಧಿಸಲಾಗಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
ಸಾಂದರ್ಭಿಕ ಚಿತ್ರ
ಬಂಧಿತ ಆರೋಪಿಯನ್ನು ದೀಪಕ್ ಪಾಸಿ (20) ಎಂದು ಗುರುತಿಸಲಾಗಿದೆ.
"ನಾಲ್ವರು ಆರೋಪಿಗಳ ವಿರುದ್ದ ಅಪಹರಣ ಹಾಗೂ ಹಲ್ಲೆ ಆರೋಪವಿದೆ" ಎಂದು ಗೋರಾ ಬಜಾರ್ ಪೊಲೀಸ್ ಠಾಣಾ ಇನ್ಸ್ಪೆಕ್ಟರ್ ಸಹದೇವ್ ಸಾಹು ತಿಳಿಸಿದ್ದಾರೆ.
"2,000 ರೂ. ಗೆ ಈ ಘಟನೆ ನಡೆದಿದೆ. ಸಂತ್ರಸ್ತ ಬಾಲಕ ಮನೆಗ ಬಾರದೇ ಇದ್ದ ಹಿನ್ನೆಲೆ, ಬಾಲಕನ ತಂದೆ ಮಗ ಕಾಣೆಯಾಗಿದ್ದಾನೆ ಎಂದು ದೂರು ದಾಖಲಸಿದ್ದರು. ಇದಾದ ಬಳಿಕ ಬಾಲಕನಿಗೆ ಥಳಿಸಿದ ವಿಡಿಯೋ ವೈರಲ್ ಆಗಿದೆ" ಎಂದು ಹೇಳಿದ್ದಾರೆ.
"ನಾಲ್ವರು ಆರೋಪಿಗಳು ಬಾಲಕನನ್ನು ನಯಂಗಾವ್ ಪ್ರದೇಶದ ಮೈದಾನಕ್ಕೆ ಕರೆದೊಯ್ದಿದ್ದು, ಓರ್ವ ಬಾಲಕನ ಕೆನ್ನೆಗೆ ಬಾರಿಸಿದ್ದಾನೆ. ಇನ್ನೋರ್ವ ಸಿಗರೇಟ್ ಸೇದುವಂತೆ ಬಲವಂತ ಮಾಡಿದ್ದಾನೆ. ಬಳಿಕ ನಾಲ್ವರೂ ಕೂಡಾ ಬಾಲಕನಿಗೆ ಬೂಟ್ ನೆಕ್ಕಲು ಒತ್ತಾಯಿಸಿದ್ದಾರೆ" ಎಂದು ತನಿಖೆಯಿಂದ ತಿಳಿದುಬಂದಿದೆ.
"ಆರೋಪಿ ಪಾಸಿಯನ್ನು ಎರಡು ದಿನಗಳ ಹಿಂದೆ ಬಂಧಿಸಲಾಗಿತ್ತು" ಎಂದು ಅಧಿಕಾರಿಗಳು ತಿಳಿಸಿದ್ದಾರೆ.