ನವದೆಹಲಿ, ಮಾ.14 (DaijiworldNews/PY): ವಿಧಾನಸಭಾ ಚುನಾವಣೆ ನಡೆಯಲಿರುವ ರಾಜ್ಯಗಳ ಉಳಿದಿರುವ ಅಭ್ಯರ್ಥಿಗಳ ಹೆಸರನ್ನು ಬಿಜೆಪಿ ಕೇಂದ್ರಿಯ ಚುನಾವಣಾ ಸಮಿತಿ ಅಂತಿಮಗೊಳಿಸಿದ್ದು, ಪ್ರಚಾರ ಪ್ರಾರಂಭಿಸಿದೆ.
"ಬಿಜೆಪಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ನಿವಾಸದಲ್ಲಿ ನಡೆದ ಎರಡು ದಿನಗಳ ಸರಣಿ ಸಭೆಯಲ್ಲಿ ಬಿಜೆಪಿ ಕೇಂದ್ರೀಯ ಚುನಾವಣಾ ಸಮಿತಿಯು ಎಲ್ಲಾ ರಾಜ್ಯಗಳ ಅಭ್ಯರ್ಥಿಗಳ ಪಟ್ಟಿಯನ್ನು ಅಂತಿಮಗೊಳಿಸಿದೆ. ಮುಂಬರುವ ದಿನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆಯಾಗಲಿದೆ" ಎಂದು ಮೂಲಗಳು ತಿಳಿಸಿವೆ.
ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಗೃಹ ಸಚಿವ ಅಮಿತ್ ಶಾ, ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹಾಗೂ ಇತರರು ಜೆ.ಪಿ.ನಡ್ಡಾ ನೇತೃತ್ವದ ಸಭೆಯಲ್ಲಿ ಭಾಗವಹಿಸಿದ್ದರು.
"ಕೇರಳದಲ್ಲಿ ಕ್ರಿಶ್ಚಿಯನ್ ಸಮುದಾಯಕ್ಕೆ ಹೆಚ್ಚಿನ ಪ್ರಾಶಸ್ತ್ಯ ನೀಡಿದ್ದು, ಆ ಸಮುದಾಯ ಕಾಂಗ್ರೆಸ್ ಪಕ್ಷದಿಂದ ಬರುವ ಮುಖಂಡರನ್ನು ಬರಮಾಡಿಕೊಳ್ಳಲು ಒಲವು ತೋರಿಸಿದೆ. ಅವರ ಜೊತೆ ಮಾತುಕತೆ ನಡೆಯುತ್ತಿದೆ" ಎಂದು ಬಿಜೆಪಿಯ ಹಿರಿಯ ಮುಖಂಡರೋರ್ವರು ಹೇಳಿದ್ದಾರೆ.
"ಪಶ್ಚಿಮ ಬಂಗಾಳದಲ್ಲಿ ಆರು ಹಂತಗಳಲ್ಲಿ ಚುನಾವಣೆ ನಡೆಯಲಿದ್ದು, ವರಿಷ್ಠರು, ಪಕ್ಷದ ಅಭ್ಯರ್ಥಿಗಳ ಹೆಸರನ್ನುಅಂತಿಮಗೊಳಿಸಿದ್ದಾರೆ" ಎಂದು ಪಶ್ಚಿಮ ಬಂಗಾಳ ಬಿಜೆಪಿ ಅಧ್ಯಕ್ಷ ದಿಲೀಪ್ ಘೋಷ್ ತಿಳಿಸಿದ್ದಾರೆ.