ಮುಂಬೈ, ಮಾ.14 (DaijiworldNews/MB) : ಉದ್ಯಮಿ ಮುಕೇಶ್ ಅಂಬಾನಿ ಅವರ ಮುಂಬೈ ನಿವಾಸದ ಸಮೀಪ ಸ್ಫೋಟಕ ಪತ್ತೆಯಾದ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ (ಎನ್ಐಎ) ಶನಿವಾರ ಮಧ್ಯರಾತ್ರಿ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಎಂಬವರನ್ನು ಬಂಧನ ಮಾಡಿದೆ.
ಮುಂಬೈ ಪೊಲೀಸ್ ಅಧಿಕಾರಿ ಸಚಿನ್ ವಾಜೆ ಅವರನ್ನು ಸುಮಾರು 12 ತಾಸು ನಿರಂತರವಾಗಿ ಪ್ರಶ್ನಿಸಲಾಗಿದ್ದು ಬಳಿಕ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಈ ಹಿಂದೆ ಈ ಪ್ರಕರಣಕ್ಕೆ ಸಂಬಂಧಿಸಿ ಹೇಳಿಕೆಯನ್ನು ದಾಖಲು ಮಾಡಲು ದಕ್ಷಿಣ ಮುಂಬೈನ ಕುಂಬಲ್ಲಾ ಬೆಟ್ಟದಲ್ಲಿರುವ ಎನ್ಐಎ ಕಚೇರಿಗೆ ಬೆಳಗ್ಗೆ 11.30ಕ್ಕೆ ಹಾಜರಾಗಲು ಸಚಿನ್ ವಾಜೆ ಅವರಿಗೆ ತಿಳಿಸಲಾಗಿತ್ತು. ಆದರೆ ಮಧ್ಯರಾತ್ರಿ 11.50ರ ಹೊತ್ತಿಗೆ ಸಚಿನ್ ವೇಜ್ ಬಂಧನ ಮಾಡಲಾಗಿದೆ ಎಂದು ಎನ್ಐಎ ತಿಳಿಸಿದೆ.
ಫೆಬ್ರುವರಿ 25ರಂದು ಮುಕೇಶ್ ಅಂಬಾನಿ ನಿವಾಸದ ಬಳಿ ಸ್ಫೋಟಕ ತುಂಬಿದ್ದ ವಾಹನ ಪತ್ತೆಯಾಗಿತ್ತು. ವಾಹನದಲ್ಲಿ ಜಿಲೆಟಿನ್ ಕಡ್ಡಿ ಹಾಗೂ ಬೆದರಿಕೆ ಪತ್ರವಿತ್ತು.
ಮನ್ಸುಖ್ ಹಿರೇನ್ ಎಂಬವರಿಗೆ ಸೇರಿದ ವಾಹನವು ಮುಕೇಶ್ ಅವರ ನಿವಾಸದ ಬಳಿ ಪತ್ತೆಯಾಗಿತ್ತು. ಆದರೆ ಅವರು ಈ ವಾಹನ ಕಳವಾಗಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಇದು ನಡೆದ ಕೆಲವೇ ದಿನಗಳಲ್ಲಿ ಅವರು ಶವವು ಥಾಣೆಯಲ್ಲಿ ನಿಗೂಢ ರೀತಿಯಲ್ಲಿ ಪತ್ತೆಯಾಗಿದೆ.