ರಾಮನಗರ, ಮಾ.13 (DaijiworldNews/MB): ''ಕೇವಲ ಒಬ್ಬರಿಗೆ ಕ್ಲೀನ್ಚಿಟ್ ನೀಡಲೆಂದು ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ ಎಸ್ಐಟಿಗೆ ನೀಡಲಾಗಿದೆ'' ಎಂದು ಸಂಸದ ಡಿ.ಕೆ.ಸುರೇಶ್ ಆರೋಪಿಸಿದ್ದಾರೆ.
ರಾಮನಗರದಲ್ಲಿ ಮಾಧ್ಯಮದೊಂದಿಗೆ ಮಾತನಾಡಿದ ಅವರು, ''ಎಸ್ಐಟಿ ಎಫ್ಐಆರ್ ಇಲ್ಲದೆಯೇ ತನಿಖೆ ನಡೆಸುತ್ತಿದೆ. ಮೇಲ್ನೋಟಕ್ಕೆ ಈ ಪ್ರಕರಣವನ್ನು ಮುಚ್ಚಿ ಹಾಕುವ ಉದ್ದೇಶ ಎದ್ದು ಕಾಣುತ್ತಿದೆ. ಎಸ್ಐಟಿಗೆ ಈ ಪ್ರಕರಣವನ್ನು ನೀಡಿ ಕಣ್ಣೊರೆಸುವ ತಂತ್ರ ನಡೆಸಲಾಗಿದೆ. ಒಬ್ಬರಿಗೆ ಕ್ಲೀನ್ ಚಿಟ್ ನೀಡಲೆಂದು ಸರ್ಕಾರ ಈ ಸಮಿತಿಯನ್ನು ರಚಿಸಿದೆ'' ಎಂದು ದೂರಿದರು.
''ಯಾವುದೇ ಒಂದು ಪ್ರಕರಣದ ಬಗ್ಗೆ ತನಿಖೆ ನಡೆಸಬೇಕಾದರೆ ಎಫ್ಐಆರ್ ದಾಖಲಾಗಬೇಕು. ಸಿಡಿ ಹಿಂದಿರುವ ವ್ಯಕ್ತಿ ಬಗ್ಗೆ ತಿಳಿಯಬೇಕಾದರೆ ಎಫ್ಐಆರ್ ಆಗುವುದು ಮುಖ್ಯ. ಆದರೆ ತನಿಖೆ ಆರಂಭವಾಗಿದ್ದರೂ ಎಫ್ಐಆರ್ ಯಾಕೆ ದಾಖಲಾಗಿಲ್ಲ'' ಎಂದು ಪ್ರಶ್ನಿಸಿದರು.
ಇನ್ನು ಇದೇ ವೇಳೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿ ಸಚಿವ ಸಿ.ಪಿ.ಯೋಗೇಶ್ವರ್ ಅವರ ಹೇಳಿಕೆಗೆ ಡಿಕೆ ಸುರೇಶ್ ಅವರು ತೀಕ್ಷ್ಣ ಪ್ರತಿಕ್ರಿಯೆ ನೀಡಿದ್ದು, ಈ ಸಿಡಿ ಪ್ರಕರಣದಲ್ಲಿ ಚನ್ನಪಟ್ಟಣದವರದ್ದೂ ಪಾತ್ರ ಇದೆ ಎಂದು ಹೇಳಿದ್ದಾರೆ.
''ಅಧಿಕಾರದ ಮೇಲೆ ಚನ್ನಪಟ್ಟಣದವರಿಗೆ ಆಸೆ ಇತ್ತಲ್ಲವೇ? ಹಾಗಾಗಿ ಅವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ. ಕನಕಪುರದವರಿಗೆ ಅಧಿಕಾರ ಆಸೆ ಇದೆ ಎಂದ ಮೇಲೆ ಚನ್ನಪಟ್ಟಣದವರಿಗೆ ಇರಲ್ವಾ?'' ಎಂದು ತಿರುಗೇಟು ನೀಡಿದ್ದಾರೆ. ''ಚಡ್ಡಿ, ಪ್ಯಾಂಟ್ ಬಿಚ್ಚೋದು ನೋಡಿರೋರು ಜೊತೆಯಲ್ಲಿದ್ದವರು. ಜೊತೆಯಲ್ಲಿದ್ದವರು ಅದನ್ನು ನೋಡಲು ಸಾಧ್ಯ. ಬೇರೆಯವರಿಂದ ಹೇಗೆ ಸಾಧ್ಯ? ಚನ್ನಪಟ್ಟಣದವರು ಅವರ ಜೊತೆಯಿದ್ದವರು. ಅವರನ್ನೇ ಕೇಳಬೇಕು'' ಎಂದರು.