ಶಿವಮೊಗ್ಗ,ಮಾ.13 (DaijiworldNews/HR): ಭದ್ರಾವತಿಯಲ್ಲಿ ನಡೆದ ಪಂದ್ಯಾವಳಿಯಲ್ಲಿ ಗೆದ್ದ ತಂಡವೊಂದು ಜೈ ಶ್ರೀರಾಮ್, ಭಾರತ್ ಮಾತಾಕೀ ಜೈ ಎಂದು ಕೂಗಿದ್ದಾರೆ. ಈ ಘೋಷಣೆ ಕೂಗಿದ್ದಕ್ಕೆ ಶಾಸಕ ಸಂಗಮೇಶ್ ಮತ್ತು ಅವರ ಪುತ್ರರಿಗೆ ಹಾಗೂ ಬೆಂಬಲಿಗರಿಗೆ ಏಕೆ ನೋವಾಯಿತೋ ಗೊತ್ತಿಲ್ಲ. ಹಾಗಾದರೆ ಪಾಕಿಸ್ತಾನ ಜಿಂದಾಬಾದ್, ಅಲ್ಲಾಹೋ ಅಕ್ಬರ್ ಎಂದು ಕೂಗಿದ್ದರೆ ಖುಷಿ ಆಗುತ್ತಿತ್ತಾ ಎಂದು ಸಚಿವ ಈಶ್ವರಪ್ಪ ಕಾಂಗ್ರೆಸ್ ನಾಯಕರನ್ನು ಪ್ರಶ್ನಿಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಭದ್ರಾವತಿಯಲ್ಲಿ ಕಬ್ಬಡಿ ಪಂದ್ಯದ ಸಮಯದಲ್ಲಿ ನಡೆದ ಘಟನೆಯಲ್ಲಿ ಜೈ ಶ್ರೀರಾಮ್, ಭಾರತ್ ಮಾತಾಕೀ ಜೈ ಎಂದು ಕೂಗಿದಕ್ಕೆ ಕಾಂಗ್ರೆಸ್ ಈ ರೀತಿ ಸಮಾವೇಶ ನಡೆಸುತ್ತಿದ್ದು, ಸಮಾವೇಶದಲ್ಲಿ ರಾಜ್ಯದ ನಾಯಕರುಗಳು ಭಾಗವಹಿಸುತ್ತಿದ್ದು, ಕಾಂಗ್ರೆಸ್ ನಾಯಕರು ಪ್ರತಿಭಟನೆ, ಸಮಾವೇಶ ನಡೆಸುವ ಮೊದಲು ಭದ್ರಾವತಿಗೆ ಒಮ್ಮೆ ಹೋಗಿ ಬರಲಿ. ಪಂದ್ಯಾವಳಿಯಲ್ಲಿ ಭಾಗವಹಿಸಿದ್ದ ಕ್ರೀಡಾಪಟುಗಳನ್ನು ಮಾತಾಡಿಸಿ ಘಟನೆ ಬಗ್ಗೆ ತಿಳಿದುಕೊಳ್ಳಲಿ" ಎಂದರು.
ಇನ್ನು ಇದೇ ವಿಚಾರವಾಗಿ ಚಿತ್ರದುರ್ಗದಲ್ಲಿಂದು ಮಾತನಾಡಿದ ಸಮಾಜಕಲ್ಯಾಣ ಸಚಿವ ಬಿ.ಶ್ರೀರಾಮುಲು, "ಭದ್ರಾವತಿ ಶಾಸಕ ಬಿ.ಕೆ.ಸಂಗಮೇಶ್ ವಿರುದ್ಧ ದಾಖಲಿಸಿರುವ ಕ್ರಿಮಿನಲ್ ಪ್ರಕರಣ ಖಂಡಿಸಿ ಕಾಂಗ್ರೆಸ್ ನಾಯಕರು ಶಿವಮೊಗ್ಗ ಚಲೋ ಪ್ರತಿಭಟನೆ ನಡೆಸಲು ಮುಂದಾಗಿದ್ದು, ಕಾಂಗ್ರೆಸ್ ನವರು ಶಿವಮೊಗ್ಗವನ್ನು ಪಾಕಿಸ್ತಾನ ಮಾಡಲು ಹೊರಟಿದ್ದಾರೆ" ಎಂದಿದ್ದಾರೆ.
ಕಾಂಗ್ರೆಸ್ ನಾಯಕರ ಆಟ ಈಗ ನಡೆಯಲ್ಲ. ಬಜೆಟ್ ಸೇರಿದಂತೆ ಯಾವುದೇ ಚರ್ಚೆಗೆ ಬಾರದೇ ಓಡುತ್ತಿದ್ದು, ಈಗ ಭದ್ರಾವತಿಯಲ್ಲೀ ಹೋರಾಟ ಮಾಡಲು ಹೊರಟಿದ್ದಾರೆ. ರಾಜ್ಯ ಸರ್ಕಾರದ ವಿರುದ್ಧ ಸೇಡಿನ ರಾಜಕಾರಣ ಮಾಡುತ್ತಿದ್ದಾರೆ" ಎಂದು ಹೇಳಿದ್ದಾರೆ.