ಬೆಂಗಳೂರು, ಮಾ.13 (DaijiworldNews/PY): "ರಮೇಶ್ ಜಾರಕಿಹೊಳಿ ಸಿ.ಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆಗೆ ಸರ್ಕಾರ ಈಗಾಗಲೇ ಎಸ್ಐಟಿ ರಚಿಸಿದೆ. ಎಸ್ಐಟಿಗೆ ಸ್ವತಂತ್ರ ನೀಡಿರುವ ಕಾರಣ, ಆ ವಿಚಾರದ ಬಗ್ಗೆ ದಿನಾ ಹೇಳಿಕೆ ನೀಡುವ ಅಗತ್ಯವಿಲ್ಲ" ಎಂದು ಗೃಹಸಚಿವ ಬಸವರಾಜ ಬೊಮ್ಮಾಯಿ ತಿಳಿಸಿದರು.
ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಎಸ್ಐಟಿಗೆ ಸ್ವತಂತ್ರ ನೀಡಿರುವುದರಿಂದ, ತನಿಖೆ ಬಗ್ಗೆ ಯಾವುದೇ ರೀತಿಯಾದ ಹೇಳಿಕೆ ನೀಡುವುದಿಲ್ಲ" ಎಂದರು.
ಶಾಸಕ ಬಸವನಗೌಡ ಪಾಟೀಲ ಯತ್ನಾಳ್ ಮೀಸಲಾತಿ ಬಗ್ಗೆ ವಿಧಾನಸಭೆಯಲ್ಲಿ ಧರಣಿ ನಡೆಸುವುದಾಗಿ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಈ ವಿಚಾರದ ಬಗ್ಗೆ ಯತ್ನಾಳ್ ಅವರೊಂದಿಗೆ ಈಗಾಗಲೇ ಮಾತುಕತೆ ನಡೆಸಿದ್ದೇನೆ. ಮೀಸಲಾತಿ ಸಂಬಂಧ ಸಮಿತಿಯನ್ನೂ ರಚನೆ ಮಾಡಿದ್ದೇವೆ. ಈ ಹಿನ್ನೆಲೆ ಪ್ರತಿಭಟನೆ ಕೈಗೊಳ್ಳಬೇಡಿ ಎಂದು ಕೋರಿದ್ದೇನೆ. ಅವರ ಬಳಿ ಮತ್ತೆ ಮಾತನಾಡುತ್ತೇವೆ. ಮೀಸಲಾತಿ ವಿಚಾರದ ಬಗೆಗಿನ ಈಗಿನ ವಸ್ತುಸ್ಥಿತಿಯ ಬಗ್ಗೆ ವಿಧಾನಸೌಧದಲ್ಲಿ ತಿಳಿಸಿದ್ದೇನೆ" ಎಂದು ಹೇಳಿದರು.
ಕಾಂಗ್ರೆಸ್ಸಿಗರು ಶಿವಮೊಗ್ಗ ಚಲೋ ಹಮ್ಮಿಕೊಂಡಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಕಾಂಗ್ರೆಸ್ಸಿಗರು ಪ್ರತಿಭಟನೆ ಕೈಗೊಳ್ಳಲಿ. ಮುಂದೆ ಏನಾಗುತ್ತದೆ ಎನ್ನುವುದನ್ನು ನೋಡೋಣ" ಎಂದು ತಿಳಿಸಿದರು.