ಬೆಂಗಳೂರು, ಮಾ.13 (DaijiworldNews/PY): ಬಿಜೆಪಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರು, ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹಾಗೂ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರ ಸಂಘಟನಾ ಸಾಮರ್ಥ್ಯಕ್ಕೆ ತಕ್ಕನಾಗಿ ಚಾತುರ್ಯ ಪ್ರದರ್ಶಿಸಿ, ಸಂಘಟನೆಗೆ ಬಲ ನೀಡದೇ ಇರುವುದು ಪಕ್ಷದ ವರಿಷ್ಠರ ಚಿಂತೆಗೆ ಕಾರಣವಾಗಿದೆ.
"ಮುಂದಿನ ವಿಧಾನಸಭಾ ಚುನಾವಣೆಗೆ ಡಿ.ಕೆ.ಶಿವಕುಮಾರ್ ಅವರು ಸದ್ದಿಲ್ಲದೇ ಸಿದ್ದತೆಗಳನ್ನು ನಡೆಸುತ್ತಿದ್ದರೂ, ನಳಿನ್ ಹಾಗೂ ಅವರ ತಂಡ ಇನ್ನೂ ಕೂಡಾ ಶ್ರದ್ದೆಯಿಂದ ಕೆಲಸ ಪ್ರಾರಂಭಿಸುವ ಚುರುಕುತನವನ್ನು ತೋರಿಸಿಲ್ಲ. ಸರ್ಕಾರದೊಂದಿಗೆ ಸಮನ್ವಯ ಸಾಧಿಸದೇ ಇರುವುದನ್ನು ವರಿಷ್ಠರು ಗಮನಿಸಿದ್ದಾರೆ" ಎಂದು ಬಿಜೆಪಿ ಮೂಲಗಳು ಹೇಳಿವೆ.
"ಮುಂದಿನ ವಿಧಾನಸಭೆ ಚುನಾವಣೆಯ ವೇಳೆಗೆ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ವಯಸ್ಸು 81 ದಾಟಿರುತ್ತದೆ. ಹಾಗಾಗಿ ಅವರು ಹಿಂದಿನ ಉತ್ಸಾದಲ್ಲಿ ಚುನಾವಣೆಯಲ್ಲಿ ಪಕ್ಷವನ್ನು ಮುನ್ನಡೆಸುವುದು ಕಷ್ಟ. ಉಳಿದ ನಾಯಕರು ಯಾರೂ ಕೂಡಾ ಅವರ ಜಾಗವನ್ನು ತುಂಬುವ ಭರವಸೆ ಮೂಡಿಸಿಲ್ಲ. ಚುನಾವಣೆಯ ಸಂದರ್ಭ ಇದೇ ರೀತಿ ಮುಂದುವರೆದರೆ ಕಷ್ಟ ಎನ್ನುವುದು ವರಿಷ್ಠರಿಗೆ ಮನವರಿಕೆಯಾಗಿದೆ. ಈ ಕಾರಣದಿಂದ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಹಲವು ಮಂದಿಯ ಬದಲಾವಣೆ ಬಗ್ಗೆ ಆಲೋಚನೆ ಪ್ರಾರಂಭಿಸಿದ್ದಾರೆ" ಎಂದು ಮೂಲಗಳು ತಿಳಿಸಿವೆ.
"ಅರುಣ್ ಸಿಂಗ್ ಅವರು ರಾಜ್ಯ ಬಿಜೆಪಿ ಉಸ್ತುವಾರಿಯಾಗಿ ನೇಮಕಗೊಂಡ ನಂತರ ತಮ್ಮದೇ ಮೂಲಗಳಿಂದ ಎಲ್ಲಾ ವಿದ್ಯಾಮಾನಗಳ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಇವರು ಪ್ರಧಾನಿ ನರೇಂದ್ರ ಮೋದಿ ಹಗೂ ಗೃಹ ಸಚಿವ ಅಮಿತ್ ಶಾ ಅವರ ಆಪ್ತರಾಗಿರುವ ಕಾರಣ ಪಕ್ಷದಲ್ಲಿ ಬದಲಾವಣೆಯ ವಿಚಾರದ ಬಗ್ಗೆ ಪ್ರಸ್ತಾಪಿಸಿದರೆ, ಪ್ರಧಾನಿ ಮೊದಿ ಹಾಗೂ ಅಮಿತ್ ಶಾ ನಿರಾಕರಿಸುವುದಿಲ್ಲ. ಬಿಜೆಪಿಗೆ ಕರ್ನಾಟಕದಂತಹ ಪ್ರಬಲ ರಾಜ್ಯಗಳಲ್ಲಿ ಪುನಃ ಅಧಿಪತ್ಯ ಸಾಧಿಸುವುದು ಅನಿವಾರ್ಯವಾಗಿದೆ. ಆದ್ದರಿಂದ, ದುರ್ಬಲ ತಂಡವನ್ನು ಕಟ್ಟಿಕೊಂಡು ಹೋರಾಡುವುದು ಕಷ್ಟ ಎನ್ನುವ ನಿಲುವಿಗೆ ವರಿಷ್ಠರು ಬಂದಿದ್ದಾರೆ" ಎಂದು ಮೂಲಗಳು ಹೇಳಿವೆ.
"ಘಟಾನುಘಟಿ ನಾಯಕರನ್ನು ಕಾಂಗ್ರೆಸ್ನಲ್ಲಿ ಕಾರ್ಯಾಧ್ಯಕ್ಷರನ್ನಾಗಿ ಮಾಡಲಾಗಿದೆ. ಪ್ರಸ್ತುತ ಆ ತಂಡವನ್ನು ಎದುರಿಸುವುದು ಬಿಜೆಪಿಗೆ ಕಷ್ಟ. ಸರ್ಕಾರದಲ್ಲಿರುವವರನ್ನು ಸಂಘಟನೆಯಲ್ಲಿ ತೊಡಗಿಸಿಕೊಳ್ಳಲು ಆಗುವುದಿಲ್ಲ. ಸಂಘಟನೆಯಲ್ಲಿರುವವರಿಗೆ ಪಕ್ಷದ ಸಂಘಟನೆಯ ಬಗ್ಗೆ ಆಳವಾದ ಜ್ಞಾನವಿಲ್ಲ. ಅವರು ಕಾರ್ಯಕರ್ತರನ್ನು ಪ್ರೇರೇಪಿಸುವ ಸಾಮರ್ಥ್ಯವನ್ನು ಪ್ರದರ್ಶಿಸಿಲ್ಲ. ಪಕ್ಷ ಸಂಘಟನೆ ಹಾಗೂ ಸರ್ಕಾರದ ನಡುವೆ ಯಾವುದೇ ಸಮನ್ವಯವಿಲ್ಲ" ಎಂದು ಮೂಲಗಳು ತಿಳಿಸಿವೆ.
"ನಳಿನ್ ಕುಮಾರ್ ಕಟೀಲ್ ಅವರ ಮೂಲಕ ಬಿ.ಎಲ್.ಸಂತೋಷ್ ಅವರು ರಾಜ್ಯ ಬಿಜೆಪಿಯನ್ನು ನಿಯಂತ್ರಿಸುತ್ತಿದ್ದಾರೆ. ಒಂದುವೇಳೆ ಯಡಿಯೂರಪ್ಪ ಅವರನ್ನು ಬದಿಗಿಟ್ಟು, ನಳಿನ್ ಅವರನ್ನ ಮುಂದಿಟ್ಟುಕೊಂಡು ಹೋದಲ್ಲಿ ಚುನಾವಣೆಯನ್ನು ಎದುರಿಸುವುದು ಅಷ್ಟು ಸುಲಭವಲ್ಲ" ಎಂದು ಮೂಲಗಳು ಹೇಳಿವೆ.
"ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ದಿ.ಎಚ್.ಎನ್. ಅನಂತಕುಮಾರ್ ಅವರ ಬೆಂಬಲಿಗರೆಂದು ಪಕ್ಷದಲ್ಲಿ ಗುರುತಿಸಿಕೊಂಡವರ ಪೈಕಿ ಅನೇಕರನ್ನು ಪಕ್ಷದ ಕಛೇರಿಯಿಂದ ಹೊರಹಾಕಲಾಗಿದೆ. ಬಿ.ಎಲ್.ಸಂತೋಷ್ ಅವರಿಗೆ ಆಪ್ತರು ಎನಿಸಿಕೊಂಡವರು ಇದೀಗ ಪಕ್ಷದ ರಾಜ್ಯ ಘಟಕದ ಕಛೇರಿಯ ಸಂಪೂರ್ಣ ನಿಯಂತ್ರಣ ಹೊಂದಿದ್ದಾರೆ" ಎಂದು ಎರಡೂ ಬಣಗಳಲ್ಲಿ ಗುರುತಿಸಿಕೊಂಡವರು ಹೇಳುತ್ತಾರೆ.
"ಪಕ್ಷದ ಕಛೇರಿಯಲ್ಲಿ ಕಾರ್ಯನಿರ್ವಹಿಸುವವರು ಹಾಗೂ ಕೆಲ ಪದಾಧಿಕಾರಿಗಳನ್ನು ವಿಧಾನಸೌಧಕ್ಕೆ ಭೇಟಿ ನೀಡುವುದನ್ನು ನಿರ್ಬಂಧಿಸಲಾಗಿದೆ. ವಿಧಾನಸೌಧಕ್ಕೆ ಯಾರೆಲ್ಲಾ ಭೇಟಿ ನೀಡುತ್ತಾರೆ ಎನ್ನುವುದನ್ನು ಗಮನಿಸಲು ಮೂರನೇ ಕಣ್ಣು ಇಡಲಾಗಿದೆ. ಈ ಬೆಳವಣಿಗೆಯಿಂದ ಹಲವು ದಶಕಗಳಿಂದ ಪಕ್ಷದ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರನ್ನು ಅಸಮಾಧಾನಗೊಳಿಸಿದೆ" ಎಂದು ಮೂಲಗಳು ತಿಳಿಸಿವೆ.