ನವದೆಹಲಿ, ಮಾ.13 (DaijiworldNews/MB): ಬಿಜೆಪಿಯ ಮಾಜಿ ನಾಯಕ, ಕೇಂದ್ರದ ಮಾಜಿ ಸಚಿವ ಯಶವಂತ್ ಸಿನ್ಹ ಶನಿವಾರ ತೃಣಮೂಲ ಕಾಂಗ್ರೆಸ್ಗೆ (ಟಿಎಂಸಿ) ಸೇರಿದರು.
''ದೇಶವು ಇಂದು ಹಿಂದೆಂದು ಕಂಡರಿಯದ ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿದೆ. ಪ್ರಜಾಪ್ರಭುತ್ವದ ಶಕ್ತಿ ಪ್ರಜಾಪ್ರಭುತ್ವದ ಸಂಸ್ಥೆಗಳ ಬಲದಲ್ಲಿದೆ. ನ್ಯಾಯಾಂಗ ಸೇರಿದಂತೆ ಈ ಎಲ್ಲ ಕ್ಷೇತ್ರವೂ ಈಗ ದುರ್ಬಲಗೊಂಡಿವೆ'' ಎಂದು ಕೋಲ್ಕತ್ತಾದ ಟಿಎಂಸಿ ಕೇಂದ್ರ ಕಚೇರಿಯಲ್ಲಿ ಯಶ್ವಂತ್ ಸಿನ್ಹಾ ಹೇಳಿದರು.
ಇತ್ತೀಚೆಗಷ್ಟೇ ತಾನು ಪ್ರಚಾರದ ಸಮಯದಲ್ಲಿ ನಾಲ್ಕೈದು ಮಂದಿ ನನ್ನನ್ನು ತಳ್ಳಿ ಗಾಯವಾಗುತ್ತದೆ ಮಾಡಿದ್ದಾರೆ ಎಂದು ಆರೋಪಿಸಿದ್ದ ಮುಖ್ಯಮಂತ್ರಿ ಮತ್ತು ಟಿಎಂಸಿ ಮುಖಂಡೆ ಮಮತಾ ಬ್ಯಾನರ್ಜಿ ಶುಕ್ರವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಏತನ್ಮಧ್ಯೆ, ಬಿಜೆಪಿ ಮತ್ತು ಟಿಎಂಸಿ ಎರಡೂ ಪಕ್ಷಗಳು ತಮ್ಮ ಚುನಾವಣಾ ಪ್ರಚಾರವನ್ನು ರಾಜ್ಯದಲ್ಲಿ ಪ್ರಾರಂಭಿಸಿರುವುದರಿಂದ ಪಶ್ಚಿಮ ಬಂಗಾಳದ ರಾಜಕೀಯ ವಾತಾವರಣ ಉದ್ವಿಗ್ನಗೊಳ್ಳುತ್ತಿದೆ. ಪಶ್ಚಿಮ ಬಂಗಾಳದಲ್ಲಿ ವಿಧಾನಸಭಾ ಚುನಾವಣೆ ಎಂಟು ಹಂತಗಳಲ್ಲಿ ನಡೆಯಲಿದೆ. 30 ಕ್ಷೇತ್ರಗಳಿಗೆ 1 ನೇ ಹಂತದ ಮತದಾನ ಮಾರ್ಚ್ 27 ರಂದು ನಡೆಯಲಿದ್ದು, 30 ಕ್ಷೇತ್ರಗಳಿಗೆ 2 ನೇ ಹಂತದ ಮತದಾನ ಏಪ್ರಿಲ್ 1 ರಂದು ನಡೆಯಲಿದೆ. 31 ಸ್ಥಾನಗಳಿಗೆ 3 ನೇ ಹಂತದ ಮತದಾನ ಏಪ್ರಿಲ್ 6 ರಂದು, 44 ಕ್ಷೇತ್ರಗಳಿಗೆ 4 ನೇ ಹಂತದಲ್ಲಿ ಏಪ್ರಿಲ್ 10ರಂದು, ಏಪ್ರಿಲ್ 17 ರಂದು 45 ಕ್ಷೇತ್ರಗಳಿಗೆ 5 ನೇ ಹಂತದ ಮತದಾನ, ಏಪ್ರಿಲ್ 22 ರಂದು 43 ಕ್ಷೇತ್ರಗಳಿಗೆ 6 ನೇ ಹಂತದ ಮತದಾನ, ಏಪ್ರಿಲ್ 26 ರಂದು 36 ಕ್ಷೇತ್ರಗಳಲ್ಲಿ 7 ನೇ ಹಂತದ ಮತದಾನ, ಏಪ್ರಿಲ್ 29 ರಂದು 35 ಕ್ಷೇತ್ರಗಳಿಗೆ 8 ನೇ ಹಂತದ ಮತದಾನ ನಡೆಯಲಿದೆ.