ಮುಂಬೈ, ಮಾ 04 (DaijiworldNews/MS): ಪಶ್ಚಿಮ ಬಂಗಾಳ ನಿಜವಾದ "ಬಂಗಾಳದ ಹುಲಿ" ಮಮತಾ ಬ್ಯಾನರ್ಜಿಗೆ ನಮ್ಮ ಬೆಂಬಲವಿದ್ದು ನಾವು ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಶಿವಸೇನೆ ತಿಳಿಸಿದೆ. ಆರ್ ಜೆಡಿ ನಾಯಕ ತೇಜಸ್ವಿ ಯಾದವ್ ಹಾಗೂ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಟಿಎಂಸಿ ಗೆ ವಿಧಾನಸಭೆ ಚುನಾವಣೆಯಲ್ಲಿ ಈಗಾಗಲೇ ಬೆಂಬಲ ಘೋಷಿಸಿದ್ದು, ಇದೀಗ ಶಿವಸೇನೆಯೂ ಮಮತಾ ಬ್ಯಾನರ್ಜಿ ಬೆಂಬಲ ಘೋಷಿಸಿದೆ.

ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಗೆ ಶಿವಸೇನೆ ಸ್ಪರ್ಧಿಸುವುದಿಲ್ಲ, ಸಂಪೂರ್ಣ ಬೆಂಬಲ ಟಿಎಂಸಿ ಶಿವಸೇನಾ ನಾಯಕ ಸಂಜಯ್ ರಾವತ್ ಘೋಷಿಸಿದ್ದಾರೆ. ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆ ಪಕ್ಷದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಈ ಹಿಂದೆ ಪಶ್ಚಿಮ ಬಂಗಾಳ ವಿಧಾನಸಭಾ ಚುನಾವಣೆಯಲ್ಲಿ ಶಿವಸೇನೆ ಸ್ಪರ್ಧಿಸಲಿದೆ ಎಂದು ಹೇಳಿದ್ದು, ಪಕ್ಷದ ಮುಖಂಡ ಉದ್ಧವ್ ಠಾಕ್ರೆ ಅವರೊಂದಿಗೆ ಚರ್ಚಿಸಿದ ನಂತರ ಸ್ಪರ್ಧಿಸದಿರುವ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ರಾವತ್ ಹೇಳಿದ್ದಾರೆ.
ಪಶ್ಚಿಮ ಬಂಗಾಳದ 294 ಸ್ಥಾನಗಳಿಗಾಗಿ ಮಾರ್ಚ್ 27 ಮತ್ತು ಏಪ್ರಿಲ್ 29ರ ನಡುವೆ 8 ಹಂತಗಳಲ್ಲಿ ಚುನಾವಣೆ ನಡೆಯಲಿದೆ.