ಬೆಂಗಳೂರು, ಮಾ.04 (DaijiworldNews/PY): "ರಮೇಶ್ ಜಾರಕಿಹೊಳಿ ರಾಜೀನಾಮೆ ಕೊಟ್ಟ ಸಂದರ್ಭ ನಾನು ಅತ್ತಿದ್ದೇನೆ. ಈ ಪ್ರಕರಣದಿಂದ ನನಗೆ ನೋವುಂಟಾಗಿದೆ" ಎಂದು ಶಾಸಕ ರೇಣುಕಾಚಾರ್ಯ ತಿಳಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ರಮೇಶ ಜಾರಕಿಹೊಳಿ ಅವರು ಒಳ್ಳೆಯ ಮನುಷ್ಯ. ಅವರ ಮನೆಯವರ ಪರಿಸ್ಥಿತಿ ನೋಡಿದರೆ ನನಗೆ ನೋವಾಗುತ್ತದೆ. ಈ ಬಗ್ಗೆ ಆ ಹುಡುಗಿ ಬಂದು ದೂರು ನೀಡಿಲ್ಲ. ರಮೇಶ್ ಜಾರಕಿಹೊಳಿ ಅವರನ್ನು ಅಪರಾಧಿ ಎಂದು ಹೇಳುವುದಿಲ್ಲ. ಆರೋಪಿ ಎಂದು ಹೇಳಲ್ಲ" ಎಂದು ಹೇಳಿದರು.
"ಇನ್ನು ಎಷ್ಟು ಸಿಡಿಗಳು ಇವೆ ಎನ್ನುವ ವಿಚಾರದ ಬಗ್ಗೆ ನನಗೆ ತಿಳಿದಿಲ್ಲ. ಬ್ಯುಸಿ ಇದ್ದ ಕಾರಣದಿಂದ ಮೂರು ವಿಡಿಯೋಗಳನ್ನು ನಾನು ಸರಿಯಾಗಿ ನೋಡಿಲ್ಲ. ಆ ವಿಡಿಯೋಗಳು ನಕಲಿ ಎಂದು ರಮೇಶ ಜಾರಕಿಹೊಳಿ ಅವರೇ ಹೇಳಿದ್ದರು" ಎಂದು ತಿಳಿಸಿದರು.
"ಈ ರೀತಿಯಾಗಿ ರಾಜಕಾರಣದಲ್ಲಿ ನಡೆಯಬಾರದು. ರಮೇಶ್ ಸಹೋದರ ಬಾಲಚಂದ್ರ ಜಾರಕಿಹೊಳಿಯೊಂದಿಗೆ ದೂರವಾಣಿ ಮುಖೇನ ಮಾತನಾಡಿದ್ದೇನೆ" ಎಂದರು.