ಬೆಂಗಳೂರು, ಫೆ.27 (DaijiworldNews/PY): "ಸಿಎಂ ಬಿ. ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಸತ್ತು ಹೋಗಿದೆ ಎನ್ನುವ ಸತ್ಯವನ್ನು ವಿಪಕ್ಷಗಳು ಹೇಳಬೇಕಾಗಿಲ್ಲ. ಅವರ ಪಕ್ಷದವರೇ ಸತ್ತಂತೆ ಇರುವ ಸರ್ಕಾರದ ನಿಷ್ಕ್ರೀಯತೆ ಬಗ್ಗೆ ಹೇಳುತ್ತಿದ್ದಾರೆ" ಎಂದು ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ಸಿಎಂ ಬಿಎಸ್ವೈ ಅವರ ವಿರುದ್ದ ವಾಗ್ದಾಳಿ ನಡೆಸಿದ್ದ ವಿಚಾರದ ಬಗ್ಗೆ ಟ್ವೀಟ್ ಮಾಡಿದ ದಿನೇಶ್ ಗುಂಡೂರಾವ್, "ಸಿಎಂ ಬಿ. ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿಸರ್ಕಾರ ಸತ್ತು ಹೋಗಿದೆ ಎನ್ನುವ ಸತ್ಯವನ್ನು ವಿಪಕ್ಷಗಳು ಹೇಳಬೇಕಾಗಿಲ್ಲ. ಅವರ ಪಕ್ಷದವರೇ ಸತ್ತಂತೆ ಇರುವ ಸರ್ಕಾರದ ನಿಷ್ಕ್ರೀಯತೆ ಬಗ್ಗೆ ಹೇಳುತ್ತಿದ್ದಾರೆ. ಬಿಜೆಪಿಯವರಿಗೆ ಅಧಿಕಾರದ ಆಸೆಯಿದೆಯೇ ಹೊರತು ಜನರ ಬಗ್ಗೆಗಿನ ಕಾಳಜಿ ಲವಲೇಶವೂ ಇಲ್ಲ ಎಂಬುದು ಸಂಸದ ಶ್ರೀನಿವಾಸ್ ಪ್ರಸಾದ್ ಮಾತಿನಿಂದ ಸಾಬೀತಾಗಿದೆ" ಎಂದಿದ್ದಾರೆ.
"ಪಕ್ಷಕ್ಕಾಗಿ ದುಡಿಯುವರಾರು ಯಾರೋ? ಸ್ವಾರ್ಥಕ್ಕೆ ಮಾಡಿಕೊಳ್ಳೋದು ಇನ್ಯಾರೋ? ತಮ್ಮ ಮನೆ ಬೆಳೆಸಿಕೊಳ್ಳೋದೇ ಆಯ್ತು. ತಮ್ಮ ಅವಧಿ ಮುಗಿಯಿತು ಎಂದು ತಪ್ಪು ಮಾಡಬಾರದು" ಎಂದು ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್ ಅವರು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ಹೆಸರನ್ನು ಪ್ರಸ್ತಾಪಿಸದೇ ವಾಗ್ದಾಳಿ ನಡೆಸಿದ್ದರು.
"ನಾವೇ ನಮ್ಮ ಬೆನ್ನನ್ನು ತಟ್ಟಿಕೊಳ್ಳುವುದಿಲ್ಲ. ನಮಗೆ ತೃಪ್ತಿ ಇರಬಹುದು. ಆದರೆ ಜನರಲ್ಲಿ ಅತೃಪ್ತಿ ಇದ್ದು, ಅವರಲ್ಲಿ ಹತಾಶೆ, ನಿರಾಸೆ ಮೂಡಿದೆ. ಈ ವಿಚಾರ ನನ್ನ ಅನುಭವಕ್ಕೂ ಬರುತ್ತಿದೆ. ಅಗತ್ಯ ವಸ್ತುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದು, ಇದು ಜನರಲ್ಲಿ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಲು ಕಾರಣವಾಗುತ್ತಿದೆ ಎನ್ನುವ ವಿವೇಚನೆ ನಮ್ಮ ರಾಜ್ಯದ ಯಾವೊಬ್ಬ ನಾಯಕರಿಗೂ ಇಲ್ಲವಾಗಿದ್ದು, ಪಕ್ಷದ ಹಿತಕ್ಕಿಂತ ಸ್ವಾರ್ಥವೇ ಮುಖ್ಯವಾಗಿದೆ" ಎಂದಿದ್ದರು.