ನವದೆಹಲಿ, ಫೆ.26 (DaijiworldNews/HR): ಸಾಮಾಜಿಕ ಜಾಲತಾಣಗಳು, ಒಟಿಟಿ ವೇದಿಕೆಗಳು, ಹೊಸ ಸುದ್ದಿ ವೆಬ್ಸೈಟ್ಗಳನ್ನು ಮೇಲೆ ಕೇಂದ್ರ ಸರಕಾರ ನಿರ್ಬಂಧ ಹೇರಲು ಮುಂದಾಗಿದ್ದು, ಈ ಸಂಬಂಧ ಹೊಸ ನಿಯಮಾವಳಿಗಳ ಕರಡನ್ನು ಹೊರಡಿಸಿದೆ.

ಕೇಂದ್ರದ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಮತ್ತು ವಾರ್ತಾ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾಬ್ಡೇಕರ್ ಪತ್ರಿಕಾಗೋಷ್ಠಿ ನಡೆಸಿ ಹೊಸ ನಿಯಮಗಳ ಬಗ್ಗೆ ಮಾಹಿತಿ ನೀಡಿದ್ದಾರೆ.
2011ರಲ್ಲಿ ಇದ್ದ ನಿಯಮಾವಳಿಗಳನ್ನು ಬದಿಗೆ ಸರಿಸಿ ಈ ಹೊಸ ನಿಯಮಗಳನ್ನು ಜಾರಿಗೊಳಿಸಲಾಗುತ್ತದೆ. ಮಾಹಿತಿ ತಂತ್ರಜ್ಞಾನ ಕಾಯ್ದೆಯಡಿ ಇವು ಜಾರಿಯಾಗಲಿವೆ ಎಂದು ತಿಳಿದು ಬಂದಿದೆ.
ಈ ನಿಯಮಗಳು ತಕ್ಷಣದಿಂದಲೇ ಜಾರಿಗೆ ಬರುತ್ತವೆ. ಸಾಮಾಜಿಕ ಮಾಧ್ಯಮದ ಪ್ರಮುಖ ಸಂಸ್ಥೆಗಳು (ಬಳಕೆದಾರರ ಸಂಖ್ಯೆಯ ಆಧಾರದಲ್ಲಿ) ಈ ನಿಯಮಗಳನ್ನು ಪಾಲಿಸಲು ಮೂರು ತಿಂಗಳ ಗಡುವು ನೀಡಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಕೇಂದ್ರ ಸಚಿವರು, "ಪ್ರಮುಖ ಸಾಮಾಜಿಕ ಜಾಲತಾಣಗಳಿಗೆ ಬಿಗಿ ನಿಯಮಗಳು ಅನ್ವಯವಾಗಲಿದ್ದು, ಒಟಿಟಿ ಮತ್ತು ಸುದ್ದಿ ವೆಬ್ಸೈಟ್ ಗಳು ಈ ನಿಯಮಗಳ ಅಡಿಯಲ್ಲಿ ಬರಲಿವೆ. ಸಾಮಾಜಿಕ ಜಾಲತಾಣಗಳು ಇನ್ನು ಮುಂದೆ ಮಾಹಿತಿ ಪ್ರಸಾರ ವ್ಯವಸ್ಥೆಯಂತೆ ಪರಿಗಣನೆಯಾಗಲಿದ್ದು, ಜವಾಬ್ದಾರಿ ಹೆಚ್ಚಿರುತ್ತದೆ" ಎಂದು ಹೇಳಿದ್ದಾರೆ.
ಇನ್ನು ನಿಯಮ ಪಾಲನಾ ಅಧಿಕಾರಿ ನೇಮಕ ಮಾಡಬೇಕು. ಸಾಮಾಜಿಕ ಮಾಧ್ಯಮಗಳಿಗೆ ಅನ್ವಯವಾಗುವ ಎಲ್ಲಾ ನಿಯಮಗಳ ಪಾಲನೆಯ ಹೊಣೆ ಈ ಅಧಿಕಾರಿಯದ್ದು, ಪ್ರಧಾನ ಸಂಪರ್ಕ ಅಧಿಕಾರಿಯನ್ನು ನೇಮಕ ಮಾಡಬೇಕು. ಸರ್ಕಾರಕ್ಕೆ ಬಂದಿರುವ ದೂರುಗಳ ಸಂಬಂಧ ಸಾಮಾಜಿಕ ಮಾಧ್ಯಮಗಳ ಮಧ್ಯಸ್ಥ ಸಂಸ್ಥೆಯನ್ನು ಸಂಪರ್ಕಿಸಲು ಪ್ರಧಾನ ಸಂಪರ್ಕ ಅಧಿಕಾರಿಯು ದಿನದ 24 ಗಂಟೆಯೂ ಲಭ್ಯವಿರಬೇಕು. ದೂರು ಪರಿಹಾರ ಅಧಿಕಾರಿಯನ್ನು ನೇಮಕ ಮಾಡಬೇಕು. ಈ ಎಲ್ಲ ಅಧಿಕಾರಿಗಳು ಭಾರತದಲ್ಲಿಯೇ ನೆಲೆಸಿರಬೇಕು ಎಂದು ಹೇಳಲಾಗಿದೆ.