ನವದೆಹಲಿ, ಫೆ.24 (DaijiworldNews/MB) : ವಯನಾಡು ಸಂಸದ ರಾಹುಲ್ ಗಾಂಧಿ ಕೇರಳದಲ್ಲಿ "ಐಶ್ವರ್ಯ ಕೇರಳ ಯಾತ್ರೆ"ಯನ್ನು ಉದ್ದೇಶಿಸಿ ಮಾತನಾಡಿದ ಬಗ್ಗೆ ಬಿಜೆಪಿ ರಾಷ್ಟ್ರೀಯ ನಾಯಕರು ರಾಹುಲ್ ಗಾಂಧಿ ವಿರುದ್ದ ತೀವ್ರ ವಾಗ್ದಾಳಿ ನಡೆಸಿದ್ದು, ''ಉತ್ತರ, ದಕ್ಷಿಣ ಭಾರತವನ್ನು ರಾಹುಲ್ ಗಾಂಧಿ ವಿಭಜಿಸುತ್ತಿದ್ದಾರೆ'' ಎಂದು ಆರೋಪಿಸಿದ್ದಾರೆ.

ರಾಹುಲ್ ಗಾಂಧಿ ವಿರುದ್ದ ಬಿಜೆಪಿ ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ, ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ವಿದೇಶಾಂಗ ಸಚಿವ ಎಸ್ ಜೈಶಂಕರ್ ಸೇರಿದಂತೆ ಹಲವು ಬಿಜೆಪಿ ನಾಯಕರು ಕಿಡಿಕಾರಿದ್ದು, "ರಾಹುಲ್ ಗಾಂಧಿ ಓರ್ವ ಅವಕಾಶವಾದಿ" ಎಂದು ಹೇಳಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ ಪಿ ನಡ್ಡಾ, ''ಕೆಲವು ದಿನಗಳ ಹಿಂದೆ ಅವರು ಈಶಾನ್ಯದಲ್ಲಿದ್ದರು, ಭಾರತದ ಪಶ್ಚಿಮ ಭಾಗದ ವಿರುದ್ಧ ವಿಷಕಾರಿದರು. ಇಂದು ದಕ್ಷಿಣದಲ್ಲಿ ಅವರು ಉತ್ತರದ ವಿರುದ್ಧ ವಿಷಕಾರುತ್ತಿದ್ದಾರೆ. ವಿಭಜಿಸಿ ಆಳುವ ರಾಜಕೀಯ ನಡೆಯುವುದಿಲ್ಲ ರಾಹುಲ್ ಅವರೇ. ಜನರು ಈ ರಾಜಕೀಯವನ್ನು ತಿರಸ್ಕರಿಸಿದ್ದಾರೆ. ಇಂದು ಗುಜರಾತ್ನಲ್ಲಿ ಏನಾಯಿತು ನೋಡಿ'' ಎಂದು ಹೇಳಿದ್ದಾರೆ.