ಬೆಂಗಳೂರು, ಫೆ.24 (DaijiworldNews/MB) : ಪೊಗರು ಸಿನಿಮಾದ ಆಕ್ಷೇಪಾರ್ಹ ದೃಶ್ಯಗಳಿಗೆ ಕತ್ತರಿ ಹಾಕಲು ನಿರ್ದೇಶಕ ನಂದಕಿಶೋರ್ ಅವರು ಒಪ್ಪಿಗೆ ಸೂಚಿಸಿದ್ದಾರೆ.

ಚಿತ್ರದಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡುವ ಸುಮಾರು 14 ದೃಶ್ಯಗಳಿದ್ದು, ಅವುಗಳನ್ನು ತೆಗೆದುಹಾಕಬೇಕು ಎಂದು ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಅಧ್ಯಕ್ಷ ಎಚ್.ಎಸ್.ಸಚ್ಚಿದಾನಂದ ಮೂರ್ತಿ ಆಗ್ರಹಿಸಿದ್ದರು
ಮಂಗಳವಾರ ಸಚ್ಚಿದಾನಂದ ಮೂರ್ತಿ ಅವರೊಂದಿಗೆ ಬ್ರಾಹ್ಮಣ ಅಭಿವೃದ್ಧಿ ಮಂಡಳಿ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಂದಕಿಶೋರ್, ''ಚಿತ್ರದಲ್ಲಿ ಕೆಲವು ದೃಶ್ಯಗಳಿಗೆ ಕತ್ತರಿ ಹಾಕುವ ಕಾರ್ಯ ಆರಂಭಿಸಿದ್ದೇವೆ. ಆದರೆ ಇದಕ್ಕೆ ಕನಿಷ್ಠ 48 ಗಂಟೆಗಳ ಸಮಯಾವಕಾಶ ಬೇಕು. ಈ ಪ್ರಕ್ರಿಯೆ ಬಳಿಕ ಮತ್ತೆ ಅದನ್ನು ಪ್ರದರ್ಶನ ವೇದಿಕೆಗಳಿಗೆ (ಉಪಗ್ರಹ ಮೂಲಕ ಚಿತ್ರಮಂದಿರಗಳಿಗೆ ಪ್ರಸಾರವಾಗುವ ವ್ಯವಸ್ಥೆ) ಅಪ್ಲೋಡ್ ಮಾಡಬೇಕಾಗುತ್ತದೆ. ಸೆನ್ಸಾರ್ ಮಂಡಳಿಗೂ ಮರು ಸೆನ್ಸಾರ್ನ್ನು ಶೀಘ್ರ ಮಾಡುವಂತೆ ಕೋರುತ್ತೇನೆ'' ಎಂದು ಹೇಳಿದರು.
ಮತ್ತೆ ಬ್ರಾಹ್ಮಣ ಸಮುದಾಯದ ಕ್ಷಮೆಯಾಚಿಸಿದ ನಂದಕಿಶೋರ್ ಅವರು, ''ಯಾರನ್ನೂ ಕೂಡಾ ಅವಮಾನಿಸಿ ಅದರಿಂದ ಹಣ ಗಳಿಸುವ ಉದ್ದೇಶ ನಮಗೆ ಇಲ್ಲ. ಆ ಕಥೆಯ ಪ್ರಕಾರ, ಪೂಜೆ, ಹೋಮ ಹವನ ನಡೆಸುವವರ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂಬುದನ್ನೂ ಹೇಳಬೇಕಿತ್ತು ಅಷ್ಟೇ, ಈ ದೃಶ್ಯಗಳು ಕಥೆಗೆ ಪೂರಕವಾದ ಅಂಶವಾಗಿತ್ತೇ ವಿನಃ ನೋಯಿಸುವ ಉದ್ದೇಶವಿರಲಿಲ್ಲ. ಶಂಕರಾಚಾರ್ಯರನ್ನು ಅನುಸರಿಸುವ ನಾನು, ಒಂದು ಸಮುದಾಯವನ್ನು ಅವಮಾನಿಸುವವನಲ್ಲ'' ಎಂದು ಸ್ಪಷ್ಟಪಡಿಸಿದ್ದಾರೆ.
ಪೊಗರು ಚಿತ್ರದಲ್ಲಿ ಬ್ರಾಹ್ಮಣರನ್ನು ಅವಹೇಳನ ಮಾಡಿರುವುದನ್ನು ಪೇಜಾವರ ಶ್ರೀ ವಿಶ್ವ ಪ್ರಸನ್ನ ತೀರ್ಥ ಶ್ರೀಪಾದರು ಕೂಡಾ ಖಂಡಿಸಿದ್ದಾರೆ.
ಧ್ರುವ ಸರ್ಜಾ ಅಭಿನಯದ, ನಂದ ಕಿಶೋರ್ ನಿರ್ದೇಶನದ ಪೊಗರು ಸಿನಿಮಾ ಇದೇ ಫೆಬ್ರವರಿ 19ರಂದು ಬಿಡುಗಡೆಯಾಗಿದೆ.