ಮುಂಬೈ, ಫೆ.20 (DaijiworldNews/MB) : ''ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಆರ್ಥಿಕ ಪ್ರಗತಿ ಹೊಂದಲು ನಿಕಟವಾಗಿ ಕಾರ್ಯ ನಿರ್ವಹಿಸಬೇಕಾದ ಅಗತ್ಯವಿದೆ'' ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

ನೀತಿ ಆಯೋಗದ ಆಡಳಿತಾತ್ಮಕ ಸಮಿತಿ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ, ''ಸರ್ಕಾರದ ಆತ್ಮ ನಿರ್ಭರ ಭಾರತ ಕಾರ್ಯಕ್ರಮದ ಭಾಗವಾಗಲು ಖಾಸಗಿ ವಲಯಗಳಿಗೆ ಸಂಪೂರ್ಣ ಅವಕಾಶ ನೀಡಬೇಕು. ದೇಶ ಅತ್ಯುನ್ನತ ವೇಗದಲ್ಲಿ ಅಭಿವೃದ್ದಿಯತ್ತ ಮುಖ ಮಾಡುವಂತಹ 2021-22ನೇ ಸಾಲಿನ ಕೇಂದ್ರ ಬಜೆಟ್ಗೆ ಉತ್ತಮ ಪ್ರತಿಕ್ರಿಯೆ ಲಭಿಸಿದೆ'' ಎಂದು ಹೇಳಿದರು.
ಇನ್ನು ಜನರ ಮೇಲೆ ಈಗಿರುವ ಹೊರೆಯನ್ನು ಕಡಿಮೆ ಮಾಡುವ ಬಗ್ಗೆ ಮಾತನಾಡಿದ ಅವರು, ತಂತ್ರಜ್ಞಾನದ ಹಿನ್ನೆಲೆಯಲ್ಲಿ ಇನ್ನು ಮುಂದೆ ನಿಯಮಗಳನ್ನು ಕಡಿಮೆ ಮಾಡಲು ಸಮಿತಿಗಳನ್ನು ರಚಿಸುವಂತೆ ರಾಜ್ಯಗಳಿಗೆ ಸೂಚಿಸಿದರು.
''ಖಾದ್ಯ ತೈಲದಂತಹ ಕೃಷಿ ಉತ್ಪನ್ನಗಳ ಉತ್ಪಾದನೆಗೆ ಪ್ರಯತ್ನಿಸಿ ಅದರ ಆಮದಿಗೆ ಕಡಿವಾಣ ಹಾಕಬೇಕು. ಆಮದಿಗಾಗಿ ಮಾಡುವ ಖರ್ಚನ್ನು ರೈತರ ಖಾತೆಗಾದರೂ ಹಾಕಬಹುದು'' ಎಂದರು.