ಬೆಂಗಳೂರು, ಫೆ. 20 (DaijiworldNews/HR): "ಹೊಟೇಲ್ ಉದ್ಯಮಕ್ಕೆ ಕೈಗಾರಿಕೆ ಸ್ಥಾನಮಾನ ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ" ಎಂದು ಪ್ರವಾಸೋದ್ಯಮ ಸಚಿವ ಸಿ.ಪಿ. ಯೋಗೇಶ್ವರ್ ಹೇಳಿದ್ದಾರೆ.

ಈ ಕುರಿತು ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ಕೊರೊನಾದಿಂದ ಪ್ರವಾಸೋದ್ಯಮ ನಲುಗಿ ಹೋಗಿದ್ದು, ಇದನ್ನೇ ನಂಬಿದ್ದ ಸಂಸ್ಥೆಗಳು ಆರ್ಥಿಕ ಹಿಂಜರಿತ ಕಂಡಿವೆ. ಈ ಸಂಸ್ಥೆಗಳಿಗೆ ಚೇತರಿಕೆ ನೀಡಬೇಕಿದ್ದು, ಹೊಟೇಲ್ ಉದ್ಯಮಕ್ಕೆ ಒತ್ತು ಕೊಡುವ ಉದ್ದೇಶದಿಂದ ತೆರಿಗೆ, ಶುಲ್ಕ ಎಲ್ಲವೂ ಕಡಿಮೆ ಮಾಡಲಾಗುತ್ತದೆ" ಎಂದರು.
ಇನ್ನು "ವಾಣಿಜ್ಯ ದರದಲ್ಲಿ ಹೋಟೆಲ್ಗಳ ನಿರ್ಮಾಣವಾಗುತ್ತಿದ್ದು, ಈಗ ಕೈಗಾರಿಕೆ ಸ್ಥಾನಮಾನ ನೀಡುವುದರಿಂದ ತೆರಿಗೆ, ಶುಲ್ಕ ಕಡಿಮೆ ಆಗಲಿದ್ದು, ಪ್ರವಾಸೋದ್ಯಮಕ್ಕೂ ಉಪಯೋಗ ಆಗಲಿದೆ. ಆದರೆ, ಸಣ್ಣ ಸಣ್ಣ ಹೊಟೇಲ್ಗಳು ಇದರಡಿ ಬರುವುದಿಲ್ಲ. ಅವುಗಳನ್ನು ಬೇರೆ ಯೋಜನೆಯಡಿ ತರಲು ಉದ್ದೇಶಿಸಲಾಗಿದೆ" ಎಂದು ಹೇಳಿದ್ದಾರೆ.
"ಪ್ರವಾಸೋದ್ಯಮ ಅಭಿವೃದ್ಧಿಗೆ ಕೇರಳ, ಗುಜರಾತ್ನಲ್ಲಿ ಹೆಚ್ಚು ಸೌಲಭ್ಯಗಳಿದ್ದು, ಕರ್ನಾಟಕದಲ್ಲಿ ಸೌಲಭ್ಯಗಳು ಕಡಿಮೆ. ಹೀಗಾಗಿ, ಅನಾನುಕೂಲ ಸರಿಪಡಿಸಲು ಈ ಕ್ರಮ ತೆಗೆದುಕೊಳ್ಳಲಾಗುತ್ತಿದೆ" ಎಂದರು.