ತಿರುವನಂತಪುರಂ, ಫೆ.20 (DaijiworldNews/PY): "ಜನ ಸಾಮಾನ್ಯರ ಮೇಲೆ ಪರಿಣಾಮ ಬೀರುವ ಸರ್ಕಾರದ ತಪ್ಪು ನೀತಿಗಳನ್ನು ನಾವು ವಿರೋಧಿಸುತ್ತೇವೆ" ಎಂದು ರಾಜ್ಯಸಭೆ ವಿರೋಧ ಪಕ್ಷದ ನೂತನ ನಾಯಕ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.

ಕೇರಳದ ಕೊಲ್ಲಂನಲ್ಲಿ ಕಾಂಗ್ರೆಸ್ ನೇತೃತ್ವದಲ್ಲಿ ಯುಡಿಎಫ್ ಆಯೋಜಿಸಿದ್ದ ಐಶ್ವರ್ಯ ಕೇರಳ ಯಾತ್ರೆಯನ್ನು ಉದ್ದೇಶಿಸಿ ಮಾತನಾಡಿದ ಅವರು, "ವಿನಾ ಕಾರಣ ಸರ್ಕಾರವನ್ನು ವಿರೋಧ ಮಾಡುವುದು ನನ್ನ ಕಾರ್ಯ ವಿಧಾನವಲ್ಲ. ಆದರೆ, ಜನಸಾಮಾನ್ಯರ ಮೇಲೆ ಪರಿಣಾಮ ಬೀರುವ ಯಾವುದೇ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ" ಎಂದಿದ್ದಾರೆ.
"ಕೇಂದ್ರ ಸರ್ಕಾರದ ಹೊಸ ಕೃಷಿ ಕಾಯ್ದೆಗಳನ್ನು ರದ್ದುಪಡಿಸುವ ಎಲ್ಲಾ ಯತ್ನಗಳನ್ನು ಮಾಡುತ್ತೇವೆ. ಸರ್ಕಾರ ಶೀಘ್ರವೇ ಈ ಕಾಯ್ದೆಗಳನ್ನು ರದ್ದುಪಡಿಸಬೇಕು" ಎಂದು ಒತ್ತಾಯಿಸಿದ್ದಾರೆ.
"ನೂತನ ಕೃಷಿ ಕಾಯ್ದೆಗಳನ್ನು ರದ್ದುಪಡಿಸಿದ ಬಳಿಕ ಕೇಂದ್ರ ಸರ್ಕಾರ ಹೊಸ ಪ್ರಸ್ತಾವವನ್ನು ತರಬೇಕು. ಈ ವಿಚಾರದ ಬಗ್ಗೆ ಸಂಸದೀಯ ಸಮಿತಿಯೊಂದಿಗೆ ಚರ್ಚಿಸಬೇಕು" ಎಂದಿದ್ದಾರೆ.
"ಕಾಂಗ್ರೆಸ್ ಪಕ್ಷದ ನಾಯಕರಾದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರು ಬಡ ಜನರ ಸಮಸ್ಯೆಯ ಬಗ್ಗೆ ಸಂಸತ್ತಿನಲ್ಲಿ ಪ್ರಸ್ತಾಪಿಸುವಂತೆ ತಿಳಿಸಿದ್ದು, ಆ ಕಾರ್ಯವನ್ನು ನಾನು ಮಾಡುತ್ತೇನೆ" ಎಂದು ತಿಳಿಸಿದ್ದಾರೆ.
ಇಂಧನ ಬೆಲೆ ಏರಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, "ಇಂಧನ ಬೆಲೆ ಏರಿಕೆಯ ಮೂಲಕ ಜನಸಾಮಾನ್ಯರಿಗೆ ಕೇಂದ್ರ ಸರ್ಕಾರ ಅನ್ಯಾಯ ಮಾಡುತ್ತಿದೆ" ಎಂದಿದ್ದಾರೆ.