ಚೆನ್ನೈ, ಫೆ. 20 (DaijiworldNews/HR): ತಮಿಳಿನ ಕಿರುತೆರೆ ನಟ ಇಂದಿರ ಕುಮಾರ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಫೆ.18 ರಂದು ನಡೆದಿದೆ.

ನಟ ಇಂದಿರ ಸ್ನೇಹಿತನ ಮನೆಗೆ ತೆರಳಿದ್ದು, ಗೆಳೆಯನ ಜತೆ ಸಿನಿಮಾ ನೋಡಿ ಬಳಿಕ ಸ್ನೇಹಿತನ ಮನೆಯಲ್ಲಿಯೇ ಉಳಿದುಕೊಂಡಿದ್ದ ಇಂದಿರ ಮರುದಿನ ಬೆಳಿಗ್ಗೆ ಎಷ್ಟು ಹೊತ್ತಾದರೂ ಹೊರಬರದಿದ್ದರಿಂದ ಅನುಮಾಗೊಂಡ ಆತನ ಸ್ನೇಹಿತ ಬಾಗಿಲು ಮುರಿದು ಒಳಗೆ ಹೋದ ವೇಳೆ ಆತ್ಮಹತ್ಯೆ ಪ್ರಕರಣ ಬೆಳಕಿಗೆ ಬಂದಿದೆ ಎನ್ನಲಾಗಿದೆ.
ಬಳಿಕ ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಮರಣೋತ್ತರ ಪರೀಕ್ಷೆಗೆ ಶವ ಸಾಗಿಸಿ, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶ್ರೀಲಂಕಾ ಮೂಲದ ಇಂದಿರ ನಟನೆಗಾಗಿ ಚೆನ್ನೈಗೆ ಬಂದು ಹೆಂಡತಿ ಹಾಗೂ ಮಗುವಿನ ಜತೆಗೆ ವಾಸವಾಗಿದ್ದ. ಇತ್ತೀಚಿಗೆ ಅಭಿನಯಕ್ಕೆ ಅವಕಾಶಗಳು ಕಡಿಮೆಯಾಗಿದ್ದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿದ್ದನಂತೆ. ಅದರ ಜತೆಗೆ ಕೌಟುಂಬಿಕ ಸಮಸ್ಯೆ ಎದುರಿಸುತ್ತಿದ್ದನಂತೆ. ಇದರಿಂದ ನೊಂದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಆತನ ಸ್ನೇಹಿತರು ಅನುಮಾನ ವ್ಯಕ್ತಪಡಿಸಿದ್ದಾರೆ.
ಯಾವುದೇ ಸಮಸ್ಯೆಗೆ ಆತ್ಮಹತ್ಯೆ ಪರಿಹಾರವಲ್ಲ. ನೀವು ಯಾವುದೇ ತೊಂದರೆಯಲ್ಲಿದ್ದರೆ ದಯವಿಟ್ಟು ಮಾನಸಿಕ ಆರೋಗ್ಯ ತಜ್ಞರ ಸಹಾಯ ಪಡೆಯಿರಿ. ಸಹಾಯವಾಣಿ ಸಂಖ್ಯೆ - 9152987821