ಬೆಂಗಳೂರು, ಫೆ. 20 (DaijiworldNews/HR): "ಉತ್ತರಾಖಂಡದ ಚಮೋಲಿ ಜಿಲ್ಲೆಯಲ್ಲಿ ನೀರ್ಗಲ್ಲು ಕುಸಿತದಿಂದ ಉಂಟಾದ ಪ್ರವಾಹಕ್ಕೆ ಸಿಲುಕಿದ್ದವರ ಮೃತ ದೇಹಗಳನ್ನು ಪತ್ತೆ ಮಾಡಲು ನಮ್ಮ ತಂಡವು ಎನ್ಡಿಆರ್ಎಫ್ಗೆ ನೆರವಾಗುತ್ತಿದೆ" ಎಂದು ಗರುಡ ಏರೋಸ್ಪೇಸ್ ಸಂಸ್ಥೆಯ ಉಪಾಧ್ಯಕ್ಷ ಶಾಶ್ವತ್ ಜೈನ್ ಹೇಳಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು "ಈ ತಿಂಗಳ ಮೊದಲ ವಾರ ನಮಗೆ ಎನ್ಡಿಆರ್ಎಫ್ನಿಂದ ಕರೆ ಬಂದಿದ್ದು, ಹೀಗಾಗಿ ನಾಲ್ಕು ಸದಸ್ಯರನ್ನೊಳಗೊಂಡ ತಂಡವನ್ನು ಉತ್ತರಾಖಂಡಕ್ಕೆ ಕಳುಹಿಸಿದ್ದೆವು. ನಮ್ಮ ತಂಡದವರು ಮೂರು ಡ್ರೋನ್ಗಳನ್ನು ಬಳಸಿ ರಕ್ಷಣಾ ಕಾರ್ಯಕ್ಕೆ ನೆರವಾಗುತ್ತಿದ್ದಾರೆ. ಈ ಡ್ರೋನ್ಗಳು ವಿಶೇಷ ಸಾಮರ್ಥ್ಯವನ್ನು ಹೊಂದಿವೆ" ಎಂದರು.
ಇನ್ನು "ದೂರವ್ಯಾಪಿ ಕಣ್ಗಾವಲಿನ ಡ್ರೋನ್ ಸರೋವರದ ರಚನೆ ಹಾಗೂ ಬಿರುಕುಗಳನ್ನು ಪತ್ತೆಹಚ್ಚಲು ಮತ್ತು ಹತ್ತಿರ ವ್ಯಾಪಿ ಕಣ್ಗಾವಲಿನ ಡ್ರೋನ್ ದುರಂತದಿಂದಾಗಿರುವ ನಷ್ಟವನ್ನು ಮೌಲ್ಯಮಾಪನ ಮಾಡಲು ಹಾಗೂ ಕಟ್ಟಡ ರಚನಾ ಪರಿಶೀಲನಾ ಡ್ರೋನ್ ಜಲವಿದ್ಯುತ್ ಸ್ಥಾವರ ಮತ್ತು ಅಣೆಕಟ್ಟೆಗೆ ಆಗಿರುವ ನಷ್ಟವನ್ನು ಅಂದಾಜಿಸಲು ಸಹಕಾರಿಯಾಗುತ್ತದೆ" ಎಂದು ತಿಳಿಸಿದ್ದಾರೆ.