ಯಾದಗಿರಿ, ಫೆ.20 (DaijiworldNews/PY): "ಸಿದ್ದರಾಮಯ್ಯ ಹಾಗೂ ಪಿಎಫ್ಐ ಇಬ್ಬರು ದೇಶದ್ರೋಹ ವಿಚಾರದಲ್ಲಿ ಒಂದೇ" ಎಂದು ಗ್ರಾಮೀಣಾಭಿವೃದ್ದಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದ್ದಾರೆ.

ಪ್ರಗತಿ ಪರಿಶೀಲನೆ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ದೇಶದ್ರೋಹದ ವಿಚಾರದಲ್ಲೊ ಸ್ಪರ್ಧೆಗೆ ಬಿದ್ದವರಂತೆ ನಾ ಮುಂದೆ ತಾ ಮುಂದೆ ಎನ್ನುತ್ತಿದ್ದಾರೆ. ಸಿದ್ದರಾಮಯ್ಯ ಗೋವಿನ ಶಾಪದಿಂದಾಗಿ ಸಿಎಂ ಸ್ಥಾನ ಹಾಗೂ ಸರ್ಕಾರವನ್ನು ಕಳೆದುಕೊಂಡರು. ಆದರೂ ಅವರಿಗೆ ಬುದ್ದಿ ಬರಲಿಲ್ಲ. ಇದೀಗ ರಾಮಮಂದಿರದ ವಿಚಾರ ಬಗ್ಗೆ ಮಾತನಾಡಿದ ಕಾರಣ ಕಾಂಗ್ರೆಸ್ ನೆಲದೊಳಗೆ ಹೋಗುತ್ತದೆ" ಎಂದಿದ್ದಾರೆ.
"ಕಾಂಗ್ರೆಸ್ನಲ್ಲಿರುವ ಅನೇಕ ಮಂದಿ ಶ್ರೀರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ. ದೇಶದ ಅನೇಕ ಮಂದಿ ಶ್ರೀರಾಮಮಂದಿರ ನಿರ್ಮಾಣಕ್ಕೆ ದೇಣಿಗೆ ನೀಡಿದ್ದಾರೆ" ಎಂದು ತಿಳಿಸಿದ್ದಾರೆ.
"ದೇಶದಲ್ಲಿ ಶ್ರೀರಾಮಮಂದಿರ ನಿರ್ಮಾಣಕ್ಕೆ ಸಿದ್ದರಾಮಯ್ಯ ಹಾಗೂ ಪಿಎಫ್ಐ ಮಾತ್ರ ದೇಣಿಗೆ ನೀಡಿಲ್ಲ. ಆದರೂ ಅವರುರಾಮಮಂದಿರ ನಿರ್ಮಾಣದ ದೇಣೆಗೆಯ ಲೆಕ್ಕ ಕೇಳುತ್ತಾರೆ. ದೇಣಿಗೆ ನೀಡುವುದಿಲ್ಲ ಎಂದ ಮೇಲೆ ಲೆಕ್ಕ ಏಕೆ ಕೇಳಬೇಕು?" ಎಂದು ಕೇಳಿದ್ದಾರೆ.
"ಸಿದ್ದರಾಮಯ್ಯ ಅವರಿಗೆ ಸುಪ್ರೀಂ ಕೋರ್ಟ್ನ ಮೇಲೆ ನಂಬಿಕೆ ಇಲ್ಲವೇ?. ಅವರು ಸಂವಿಧಾನವನ್ನು ಅರೆದು ಕುಡಿದವರಂತೆ ಮಾತನಾಡುತ್ತಾರೆ. ಅಂಬೇಡ್ಕರ್ ಅವರನ್ನು ಬಿಟ್ಟರೆ ನನಗೆ ಎಲ್ಲಾ ತಿಳಿದಿದೆ ಎಂದುಕೊಂಡಿದ್ದಾರೆ" ಎಂದು ವ್ಯಂಗ್ಯವಾಡಿದ್ದಾರೆ.
"ಚುನಾವಣೆಯು ನಿಗದಿತ ಸಮಯದಲ್ಲಿ ನಡೆಯುತ್ತದೆ. ಎಪ್ರಿಲ್ ಅಥವಾ ಮೇ ತಿಂಗಳಿನಲ್ಲಿ ಚುನಾವಣೆ ನಡೆಯುತ್ತವೆ" ಎಂದಿದ್ದಾರೆ.