ಮೈಸೂರು, ಫೆ.19 (DaijiworldNews/PY): "ನಾವು ಎರಡು ವರ್ಷದಲ್ಲಿ ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಬಡವರಿಗೆ ಹತ್ತು ಕೆ.ಜಿ ಅಕ್ಕಿ ನೀಡುತ್ತೇವೆ" ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಮೈಸೂರಿನಲ್ಲಿ ಮಾತನಾಡಿದ ಅವರು, "ನಾನು ಅಧಿಕಾರದಲ್ಲಿದ್ದ ಸಂದರ್ಭ ಪ್ರತಿಯೋರ್ವರಿಗೂ ಉಚಿತವಾಗಿ 7 ಕೆಜಿ ಅಕ್ಕಿ ನೀಡಿದ್ದೆ. ಈಗ ಐದು ಕೆ.ಜಿ ಮಾಡಿದ್ದಾರೆ. ಮುಂದೆ ಮೂರು ಕೆ.ಜಿ ಮಾಡುತ್ತಾರಂತೆ. ಬಡವರ ಹೊಟ್ಟೆ ಮೇಲೆ ಹೊಡೆಯುವ ಇವರನ್ನು ಸಹಿಸಿಕೊಳ್ಳಲು ಸಾಧ್ಯವೇ?" ಎಂದು ಪ್ರಶ್ನಿಸಿದ್ದಾರೆ.
"ನಾವು ಎರಡು ವರ್ಷದಲ್ಲಿ ಮತ್ತೆ ಅಧಿಕಾರಕ್ಕೇರುತ್ತೇವೆ. ಪ್ರತಿಯೋರ್ವರಿಗೂ 10 ಕೆ.ಜಿ ಅಕ್ಕಿ ಕೊಡುತ್ತೇವೆ. ಎಷ್ಟು ದುಡ್ಡು ಬೇಕಾದರೂ ಖರ್ಚಾಗಲಿ. ಇದರಲ್ಲಿ ಯಾವುದೇ ಅನುಮಾನವಿಲ್ಲ. ನಾವು ಮತ್ತೆ ಅಧಿಕಾರಕ್ಕೆ ಬಂದೇ ಬರುತ್ತೇವೆ" ಎಂದಿದ್ದಾರೆ.