ಬೆಂಗಳೂರು, ಫೆ.19 (DaijiworldNews/HR): "ಫೆ. 22ರಿಂದ 6 ರಿಂದ 8ನೇ ತರಗತಿಗಳು ಆರಂಭವಾಗುತ್ತಿರುವುದರಿಂದ ಮಕ್ಕಳ ಸಂಖ್ಯೆ ಶಾಲೆಗಳಲ್ಲಿ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಶಾಲೆಗಳಲ್ಲಿ ಕೊರೊನಾ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸಬೇಕು" ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ಸೂಚನೆ ನೀಡಿದ್ದಾರೆ.

"ಶಾಲೆ ಪ್ರಾರಂಭದ ಕುರಿತಂತೆ ಸಾರ್ವಜನಿಕ ಶಿಕ್ಷಣ ಇಲಾಖೆ ಇಂದು ಸುತ್ತೋಲೆ ಹೊರಡಿಸಿದ್ದು, ಸುತ್ತೋಲೆಯಲ್ಲಿ ವಿವರಿಸಿರುವ ಅಂಶಗಳು ಹಾಗೂ ಆರೋಗ್ಯ ಇಲಾಖೆಯ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು" ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇನ್ನು "6ನೇ ತರಗತಿಯ ನಂತರದ ವಿದ್ಯಾರ್ಥಿಗಳು ಮನೆಯಿಂದ ಮಧ್ಯಾಹ್ನದ ಊಟ ತರಬಹುದಾಗಿದ್ದು, ಸಾಮಾಜಿಕ ಅಂತರ ಮತ್ತು ಶುಚಿತ್ವ ಕಾಪಾಡುವುದು ಮತ್ತು ಮಾಸ್ಕ್ ಹಾಕುವುದನ್ನು ಕಡ್ಡಾಯಗೊಳಿಸಲಾಗಿದೆ" ಎಂದು ಹೇಳಿದ್ದಾರೆ.
"ಸುತ್ತೋಲೆಯಲ್ಲಿ ವಾರದ ಐದು ದಿನಗಳು 6ರಿಂದ ಮೇಲಿನ ತರಗತಿಗಳು ಬೆಳಗ್ಗೆ 10ರಿಂದ 4.30ರವರೆಗೆ ಮತ್ತು ಶನಿವಾರ ಬೆಳಗ್ಗೆ 10.30ರಿಂದ 12.30ರವರೆಗೆ ನಡೆಯಲಿವೆ ಎಂದು ಸಲಹಾತ್ಮಕ ವೇಳಾಪಟ್ಟಿ ನಿಗದಿಪಡಿಲಾಗಿದೆ" ಎಂದು ತಿಳಿಸಿದ್ದಾರೆ.