ಬೆಂಗಳೂರು, ಫೆ.19 (DaijiworldNews/HR): "ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆ ವಿರೋಧಿಸಿ ರೈತರು ದೆಹಲಿಯಲ್ಲಿ ನಡೆಸುತ್ತಿರುವ ಪ್ರತಿಭಟನೆಗೆ ಬೆಂಬಲಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೇತೃತ್ವದಲ್ಲಿ ಮಾರ್ಚ್ 20ರಿಂದ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ರೈತರ ಸಮಾವೇಶಗಳನ್ನು ಹಮ್ಮಿಕೊಳ್ಳಲಾಗುವುದು" ಎಂದು ರೈತ ಸಂಘದ ವರಿಷ್ಠೆ ಚುಕ್ಕಿ ನಂಜುಂಡಸ್ವಾಮಿ ಹೇಳಿದ್ದಾರೆ.

ಈ ಕುರಿತು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಮಾರ್ಚ್ 20ರಂದು ಶಿವಮೊಗ್ಗದಲ್ಲಿ ಮೊದಲ ಸಮಾವೇಶ ನಡೆಯಲಿದ್ದು, 21ರಂದು ಹಾವೇರಿ, 22ರಂದು ಬೆಳಗಾವಿಯಲ್ಲಿ ನಡೆಯಲಿದೆ. ಸಮಾವೇಶಗಳಲ್ಲಿ ಭಾರತೀಯ ಕಿಸಾನ್ ಯೂನಿಯನ್ನ ವಕ್ತಾರ ರಾಕೇಶ್ ಟಿಕಾಯತ್ ಹಾಗೂ ರಾಷ್ಟ್ರೀಯ ಕಾರ್ಯದರ್ಶಿ ಯುದ್ಧವೀರ್ ಸಿಂಗ್ ಭಾಗವಹಿಸಲಿದ್ದಾರೆ" ಎಂದರು.
ಇನ್ನು "ರಾಜ್ಯದ ವಿವಿಧ ಜಿಲ್ಲೆಗಳಿಗೂ ಸಮಾವೇಶಗಳನ್ನು ವಿಸ್ತರಿಸಲು ಯೋಜನೆ ಹಾಕಿಕೊಂಡಿದ್ದು, ರೈತ ಚಳವಳಿ ಕಟ್ಟಲು ಇದು ಒಳ್ಳೆಯ ಸಂಧರ್ಭವಾಗಿದ್ದು, ಎಲ್ಲ ಅಡೆತಡೆಗಳನ್ನು ಮೀರಿ ರೈತರು ಹಾಗೂ ರೈತ ಮಹಿಳೆಯರು ದೆಹಲಿಯಲ್ಲಿ ಪ್ರತಿಭಟನೆಯಲ್ಲಿ ತೊಡಗಿದ್ದಾರೆ. ಅವರಿಗೆ ರೈತರ ಪ್ರತೀಕವಾದ ಹಸಿರು ಶಾಲುಗಳನ್ನು ರಾಜ್ಯದಿಂದ ರವಾನಿಸಲಾಗುವುದು. ಈ ಮೂಲಕ ರೈತರು ಒಬ್ಬಂಟಿಯಲ್ಲ ಎಂಬ ಸಂದೇಶದೊಂದಿಗೆ ಅವರ ಪರ ನಿಲ್ಲಲಿದ್ದೇವೆ" ಎಂದು ಹೇಳಿದ್ದಾರೆ.